ಅಭಿಪ್ರಾಯ / ಸಲಹೆಗಳು

ನಮ್ಮ ಕುರಿತು

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1965
ಮತ್ತು
ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು, 1968

 

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವಾಲಯ
ಕ್ರಮಾಂಕ: ಲಾ 7 ಎಲ್‍ಎಂಪಿ 90 ದಿನಾಂಕ: 16ನೇ ಏಪ್ರಿಲ್ 1990.

ಅಧಿಸೂಚನೆ

ಕರ್ನಾಟಕ ರಾಜ್ಯಭಾಷಾ ಅಧಿನಿಯಮ, 1963 (1963ರ ಕರ್ನಾಟಕ ಅಧಿನಿಯಮ 26)ರ 5ಕ ಪ್ರಕರಣದಿಂದ ಪ್ರದತ್ತವಾದ ಅಧಿಕಾರಿಗಳನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲನಾದ ಶ್ರೀ ಎಸ್. ಮೋಹನ್ ಎಂಬ ನಾನು, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1965 ಮತ್ತು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು, 1968 ಇದರ ಕನ್ನಡ ಭಾಷೆಯಲ್ಲಿರುವ ಈ ಮುಂದಿನ ಭಾಷಾಂತರವು ಸರ್ಕಾರಿ ರಾಜಪತ್ರದಲ್ಲಿ ಈ ಅಧಿಸೂಚನೆಯು ಪ್ರಕಟವಾದ ದಿನಾಂಕದಿಂದ ಪರಿಣಾಮಕಾರಿಯಾಗುವಂತೆ ಕನ್ನಡ ಭಾಷೆಯಲ್ಲಿ ಅದರ ಅಧಿಕೃತ ಪಾಠವಾಗಿರತಕ್ಕುದೆಂದು ಈ ಮೂಲಕ ನಿರ್ದಿಷ್ಟಪಡಿಸುತ್ತೇನೆ.

                                                                                                                                                                                                                                                                                                             ಸಹಿ:-
                                                                                                                                         ಎಸ್. ಮೋಹನ್,
                                                                                                                                    ಕರ್ನಾಟಕ ರಾಜ್ಯಪಾಲರು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಅರ್ಜುನಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಕಾನೂನು ಮತ್ತು ಸಂಸದೀಯ ವ್ಯವಹಾಗಳ ಇಲಾಖೆ,
(ಪ್ರಕಟಣೆಗಳು)

 

 

 

ಅಧಿನಿಯಮಗಳು
ಕ್ರ.ಸಂ   ವಿಷಯ
1 ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ
2 ಪರಿಭಾಷೆ
3 ಕಲ್ಯಾಣ ನಿಧಿ
4 ಮಂಡಳಿ
5 ಅನರ್ಹತೆಗಳು ಮತ್ತು ತೆಗೆದುಹಾಕುವುದು
6 ಸದಸ್ಯನಿಂದ ರಾಜೀನಾಮೆ ಮತ್ತು ಆಕಸ್ಮಿಕ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವುದು
7 ಸಂದಾಯ ಮಾಡಿಲ್ಲದ ಸಂಚಯಗಳು ಮತ್ತು ಅವುಗಳ ಬಗ್ಗೆ ಕ್ಲೇಮುಗಳು
7-ಕ ವಂತಿಗೆ
7-ಖ ತಗಾದೆ ನೋಟೀಸಿನ ತರುವಾಯ ಸಂದಾಯ ಮಾಡಿಲ್ಲದ ಸಂಚಯ ಅಥವಾ ಜುಲ್ಮಾನೆಗಳ ಮೇಲಣ ಬಡ್ಡಿ
8 ನಿಧಿಯನ್ನು ನಿಹಿತಗೊಳಿಸುವುದು ಮತ್ತು ಅದರ ವಿನಿಯೋಗ
9 ಸಾಲ ಪಡೆಯಲು ಮಂಡಳಿಯ ಅಧಿಕಾರ
10 ನಿಧಿಯ ಹೂಡಿಕೆ
11 ಮಂಡಳಿಗೆ ರಾಜ್ಯ ಸರ್ಕಾರದಿಂದ ನಿರ್ದೇಶನ
12 ಕಲ್ಯಾಣ ಆಯುಕ್ತರ ನೇಮಕಾತಿ ಮತ್ತು ಅಧಿಕಾರಿಗಳು
13 ಪರಿಶೀಲಕರ ನೇಮಕಾತಿ
14 ಮಂಡಳಿಯಿಂದ ಲಿಪಿಕ ಮತ್ತು ಇತರ ಸಿಬ್ಬಂದಿಯ ನೇಮಕಾತಿ
15 ಮಂಡಳಿಯ ಸಿಬ್ಬಂದಿಗೆ ಸೇರಿದ ಯಾವನೇ ವ್ಯಕ್ತಿಯನ್ನು ತೆಗೆದು ಹಾಕಲು ರಾಜ್ಯ ಸರ್ಕಾರದ ಅಧಿಕಾರ
16 ದಾಖಲೆಗಳು ಇತ್ಯಾದಿಗಳನ್ನು ತರಿಸಿಕೊಳ್ಳಲು ರಾಜ್ಯ ಸರ್ಕಾರದ ಅಥವಾ ಅಧಿಕೃತತೊಳಿಸಿದ ಅಧಿಕಾರಿಯ ಅಧಿಕಾರ
17 ನಿಧಿಗೆ ಸಂದಾಯ ಮಾಡಬೇಕಾದ ಮೊತ್ತಗಳ ವಸೂಲಿಯ ವಿಧಾನ ಇತ್ಯಾದಿ
17-ಕ ಪರಿಶೀಲಕನು ಅವನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಅಥವಾ ದಸ್ತಾವೇಜುಗಳು ಇತ್ಯಾದಿಗಳನ್ನು ಹಾಜರುಪಡಿಸಲು ತಪ್ಪುವುದಕ್ಕಾಗಿ ದಂಡನೆ
17-ಖ ಅಧಿನಿಯಮದ ಯಾವುದೇ ಉಪಬಂಧಗಳ ಉಲ್ಲಂಘನೆಗಾಗಿ ದಂಡನೆ
17-ಗ ಅಪರಾಧಗಳ ಸಂಜ್ಞೇಯತೆ
18 ಮಂಡಳಿಯನ್ನು ರದ್ದುಗೊಳಿಸುವುದು
19 ನಿಯಮಗಳು (1)
20 ಮಂಡಳಿಯ ಸದಸ್ಯರು, ಕಲ್ಯಾಣ ಆಯುಕ್ತರನ್ನು, ಪರಿಶೀಲಕರು ಮತ್ತು ಮಂಡಳಿಯ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಲೋಕ ನೌಕರರಾಗಿರತಕ್ಕದ್ದು.
21 ಸದ್ಭಾವನೆಯಿಂದ ಕಾರ್ಯ ನಿರ್ವಹಿಸುವ ವ್ಯಕ್ತಿಗಳಿಗೆ ಸಂರಕ್ಷಣೆ
22 ವಿನಾಯಿತಿ  
23 ನಿಯಮಗಳು ಮತ್ತು ಅಧಿಸೂಚನೆಗಳನ್ನು ರಾಜ್ಯ ವಿಧಾನ ಮಂಡಲದ ಮುಂದೆ ಇಡತಕ್ಕುದ್ದು
24 ಸರ್ಕಾರಿ ಕಾರ್ಮಿಕ ಕಲ್ಯಾಣ ಕೇಂದ್ರಗಳನ್ನು ಮಂಡಳಿಗೆ ವರ್ಗಾಯಿಸಬಹುದು.
25 ಕೇಂದ್ರಾಧಿನಿಯಮ 1963ರ 4ರ 8ನೇ ಪ್ರಕರಣದ ತಿದ್ದುಪಡಿ
26 ನಿರಸನ ಮತ್ತು ಉಳಿಸುವಿಕೆಗಳು

 

 

 

ಕರ್ನಾಟಕ ಆಧಿನಿಯಮ 1965 ರ ಸಂಖ್ಯೆ 15

                                                             ( 1965 ರ ಆಗಸ್ಟ್ ಐದನೇ ದಿವಸದಂದು ಕರ್ನಾಟಕ ರಾಜ ಪತ್ರದಲ್ಲಿ ಮೊದಲು ಪ್ರಕಟವಾಯಿತು)

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1965

                                                                   (1965 ರ ಜುಲೈ ಎಂಟನೇ ದಿವಸದಂದು ರಾಷ್ಟ್ರಪತಿಯ ಅನುಮತಿಯನ್ನು ಪಡೆಯಿತು)

ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣವಣನ್ನು ಸಂವರ್ಧಗೊಳಿಸುವುದಕ್ಕೆ ಹಣಕಾಸು ಒದಗಿಸಲು ಮತ್ತು ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ಒಂದು ನಿಧಿಯನ್ನು ರಚಿಸುವುದಕ್ಕಾಗಿ ಉಪಬಂಧಿಸುವ ಅಧಿನಿಯಮ.

ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣವನ್ನು ಸಂವರ್ಧನಗೊಳಿಸುವುದಕ್ಕಾಗಿ ಹಣಕಾಸು ಒದಗಿಸಲು ಮತ್ತು ಚಟುವಟಿಕೆಗಳನ್ನು ನಡೆಸುವುದಕ್ಕಾಗಿ ನಿಧಿಯನ್ನು ರಚಿಸುವುದು ವಿಹಿತವಾಗಿರುವುದರಿಂದ :

ಭಾರತ ಗಣರಾಜ್ಯದ ಹದಿನಾರನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮಿತವಾಗತಕ್ಕುದು ;

 1. ಚಿಕ್ಕ ಹೆಸರು, ವ್ಯಾಪ್ತಿ ಮತ್ತು ಪ್ರಾರಂಭ
  1. ಈ ಅಧಿನಿಯಮವನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1965 ಎಂದು ಕರೆಯುತಕ್ಕುದು.
  2. ಇದು ಇಡೀ ಕರ್ನಾಟಕ ರಾಜ್ಯಕ್ಕೆ ವ್ಯಾಪ್ತವಾಗುತ್ತದೆ.
  3. ಇದು ರಾಜ್ಯ ಸರ್ಕಾರವು, ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಂದು ಜಾರಿಗೆ ಬರತಕ್ಕುದು ಮತ್ತು ರಾಜ್ಯದ ಬೇರೆ ಬೇರೆ ಪ್ರದೇಶಕ್ಕಾಗಿ ಬೇರೆ ಬೇರೆ ದಿನಾಂಕಗಳನ್ನು ಗೊತ್ತುಪಡಿಸಬಹುದು.
 2. ಪರಿಭಾಷೆ – ಈ ಅಧಿನಿಯಮದಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು.
  1. “ ಮಂಡಲಿ” ಎಂದರೆ 4ನೇ ಪ್ರಕರಣದ ಮೇರೆಗೆ ರಚಿಸಲಾದ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಲಿ ;
  2. “ ವಂತಿಗೆ” ಎಂದರೆ, 7ಕ ಪ್ರಕರಣದ ಉಪಬಂಧಗಳಿಗನುಸಾರವಾಗಿ ಮಂಡಲಿಗೆ ಸಂದಾಯವಾಗಬೇಕಾದ ನಿಯೋಜಕನ ವಂತಿಗೆ, ನಿಯೋಜಿತರ ವಂತಿಕೆ ಮತ್ತು ರಾಜ್ಯ ಸರ್ಕಾರದ ವಂತಿಗೆಯನ್ನು ಒಳಗೊಂಡಿರುವ ಹಣದ ಮೊತ್ತ ;
  3. ನಿಯೋಜಿತ” ಎಂದರೆ ಒಂದು ಕಾರ್ಯ ಸಂಸ್ಥೆಯಲ್ಲಿ ಯಾವುದೇ ಕುಶಲ ಅಥವಾ ಕುಶಲವಲ್ಲದ ದೈಹಿಕ ಅಥವಾ ಲಿಪಿಕ ಕೆಲಸವನ್ನು ಮಾಡಲು ಮಜೂರಿಯ ಮೇಲೆ ನಿಯೋಜಿತನಾದ ಯಾವನೇ ವ್ಯಕ್ತಿ ;
  4. “ ನಿಯೋಜಕ” ಎಂದರೆ ಒಂದು ಕಾರ್ಯ ಸಂಸ್ಥೆಯಲ್ಲಿ ಒಬ್ಬ ಅಥವಾ ಅದಕ್ಕಿಂತ ಹೆಚ್ಚು ನಿಯೋಜಿತರನ್ನು ಅವನ ಅಥವಾ ಇತರ ಯಾವನೇ ವ್ಯಕ್ತಿಯ ಪರವಾಗಿಯಾಗಲೀ, ನೇರವಾಗಿಯಾಗಲೀ ಅಥವಾ ಇನ್ನೊಬ್ಬ ವ್ಯಕ್ತಿಯ ಮೂಲಕವಾಗಲೀ ನಿಯೋಜಿಸಿ ಕೊಳ್ಳುವ ಯಾವನೇ ವ್ಯಕ್ತಿ ಮತ್ತು ಇದು ;
   1. ಕಾರ್ಖಾನೆಯಲ್ಲಿ ವ್ಯವಸ್ಥಾಪಕನೆಂದು ಕಾರ್ಖಾನೆಗಳ ಅಧಿನಿಯಮ, 1948 ರ (7) (1) (ಚ) ಪ್ರಕರಣದ ಮೇರೆಗೆ ಹೆಸರಿಸಿದ ಯಾವನೇ ವ್ಯಕ್ತಿ ;
   2. ಯಾವುದೇ ಕಾರ್ಯ ಸಂಸ್ಥೆಯಲ್ಲಿ ನಿಯೋಜಿತರ ಮೇಲೆ ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಅಥವಾ ಮಜೂರಿಗಳನ್ನು ಸಂದಾಯ ಮಾಡುವುದಕ್ಕಾಗಿ ಒಡೆಯನಿಗೆ ಜವಾಬ್ದಾರನಾಗಿರುವ ಯಾವನೇ ವ್ಯಕ್ತಿ -- ಇವರನ್ನು ಒಳಗೊಳ್ಳುತ್ತದೆ.
  5. “ ಕಾರ್ಯ ಸಂಸ್ಥೆ” ಎಂದರೆ :
   1. ಒಂದು ಕಾರ್ಖಾನೆ ;
   2. ಮೋಟಾರ್ ದೊಡ್ಡ ಬಾಡಿಗೆ ಬಸ್ ಸೇವೆ;
   3. ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ, 1960 ರ ಮೇರಗೆ, ನೋಂದಾಯಿತ. ವಾದ ಅಥವಾ ನೋಂದಾಯಿಸಲಾಗಿದೆ. ಎಂದು ಭಾವಿಸಲಾದ ಸಂಘ ಮತ್ತು ಧರ್ಮಾರ್ಥ ಅಥವಾ ಇತರ ನ್ಯಾಸಕ್ಕೆ ಸಂಬಂಧಿಸಿ ಅಥವಾ ಅದಕ್ಕೆ ಸಹಾಯಕವಾದ ಯಾವುದೇ ವ್ಯವಹಾರ ಅಥವಾ ವ್ಯಾಪಾರ ಅಥವಾ ಯಾವುದೇ ಕೆಲಸವನ್ನು ನಡೆಸುತ್ತಿರುವಂಥ ಮತ್ತು ಐವತ್ತಕ್ಕಿಂತ ಹೆಚ್ಚಿನ ವ್ಯಕ್ತಿಗಳನ್ನು ನಿಯೋಜಿಸಿಕೊಂಡಿರುವಂಥ ಅಥವಾ ಹಿಂದಿನ ಹನ್ನೆರಡು ತಿಂಗಳಗಳಲ್ಲಿ ಯಾವುದೇ ಕೆಲಸದ ದಿವಸದಂದು ಅವರನ್ನು ನಿಯೋಜಿಸಿಕೊಂಡಿರುದ್ದಂಥ ಅದಕ್ಕೆ ಅನ್ವಯವಾಗುವ ಯಾವುದೇ ಕಾನೂನಿನ ಮೇರೆಗೆ ನೋಂದಾಯಿತವಾಗಿರಲಿ ಅಥವಾ ಇಲ್ಲದಿರಲಿ ಆ ಧರ್ಮಾರ್ಥ ಅಥವಾ ಇತರ ನ್ಯಾಸವನ್ನೂ ಒಳಗೊಂಡ ಯಾವುದೇ ಕಾರ್ಯ ಸಂಸ್ಥೆ ;
    ಆದರೆ ಇದು, ಕೇಂದ್ರ ಅಥವಾ ಯಾವುದೇ ರಾಜ್ಯಸರ್ಕಾರದ (ಕಾರ್ಖಾನೆಯಾಗಿಲ್ಲದ) ಕಾರ್ಯಸಂಸ್ಥೆಯನ್ನು ಒಳಗೊಳ್ಳುವುದಿಲ್ಲ ಮತ್ತು ;
   4. ಯಾವುದೇ ನೆಡುತೋಪು ಅಥವಾ ಕಾರ್ಯಗಾರಗಳು ;
  6. “ ಕಾರ್ಖಾನೆ” ಎಂದರೆ ಕಾರ್ಖಾನೆಗಳ ಅಧಿನಿಯಮ, 1948 ರ 2 (ಡ) ಪ್ರಕರಣದಲ್ಲಿ ಪರಿಭಾಷಿಸಿದಂತೆ ಕಾರ್ಖಾನೆ ;
  7. “ ನಿಧಿ” ಎಂದರೆ 3ನೇ ಪ್ರಕರಣದ ಮೇರೆಗೆ ರಚಿಸಲಾದ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ;
  8. “ ಸ್ವತಂತ್ರ ಸದಸ್ಯ” ಎಂದರೆ, ಯಾವುದೇ ಕಾರ್ಯಸಂಸ್ಥೆಯ ವ್ಯವಸ್ಥಾಪನೆಯೊಂದಿಗೆ ಸಂಬಂಧಿಲ್ಲದ ಅಥವಾ ನಿಯೋಜಿತನಾಗಿರುವ ಮಂಡಲಿಯ ಸದಸ್ಯ ಮತ್ತು ಇದು ಸದಸ್ಯನಾಗಿ ನಾಮ ನಿರ್ದೇಶಿತನಾದ ಸರ್ಕಾರದ ಅಧಿಕಾರಿಗಳನ್ನು ಒಳಗೊಳ್ಳುತ್ತದೆ.
  9. “ ಪರಿಶೀಲಕ” ಎಂದರೆ 1ನೇ ಪ್ರಕರಣದ ಮೇರೆಗೆ ನೇಮಕಗೊಂಡ ಪರಿಶೀಲಕ.
  10. “ನಿಯಮಿಸಲಾದುದು”ಎಂದರೆ ಈ ಅಧಿನಿಯಮದ ಮೇರೆಗೆ ರಚಿಸಿದ ನಿಯಮಗಳ ಮೂಲಕ ನಿಯಮಿಸಲಾದುದು ;
  11. “ ಸಂದಾಯ ಮಾಡಿಲ್ಲದ ಸಂಚಯಗಳು” ಎಂದರೆ ನಿಯೋಜಕನು ಕಾನೂನು ಸಮ್ಮತವಾಗಿ ಸಂದಾಯ ಮಾಡಬೇಕಾದ ಮಜೂರಿಗಳು ಮತ್ತು ಉಪದಾನಗಳನ್ನು ಒಳಗೊಂಡು ಆದರೆ ನಿಯೋಜಿತರ ಭವಿಷ್ಯ ನಿಧಿಗಳ ಅಧಿನಿಯಮ 1952ರ ಮೇರೆಗೆ, ಸ್ಥಾಪಿಸಿದ ಭವಿಷ್ಯ ನಿಧಿಗೆ ನಿಯೋಜಕನು ಸಂದಾಯ ಮಾಡಿದ ವಂತಿಗೆಯ ಮೊಬಲಗು ಯಾವುದಾದರೂ ಇದ್ದರೆ, ಅದನ್ನು ಒಳಗೊಳ್ಳದ ಈ ಅಧಿನಿಯದ ಪ್ರಾರಂಭಕ್ಕೆ ಮುಂಚೆಯಾಗಲಿ ಅಥವಾ ಅ ತರುವಾಯವಾಗಲಿ ಅವು ಜಾರಿಯಾದಂಥ ದಿನಾಂಕದಿಂದ ಮೂರು ವರ್ಷಗಳ ಅವಧಿಯೊಳಗೆ ನಿಯೋಜಿತರಿಗೆ ಬಾಕಿಯಾದ ಅದರೆ ಅವರಿಗೆ ಸಂದಾಯ ಮಾಡಿಲ್ಲದ ಎಲ್ಲಾ ಸಂದಾಯಗಳು ;
  12. “ ಮಜೂರಿಗಳು” ಎಂದರೆ ಯಾವುದು ವ್ಯಾಪ್ತವಾದ ಅಥವಾ ಇಂಗಿತವಾದ ನಿಯೋಜನೆಯ ಕರಾರಿನ ನಿಬಂಧನೆಗಳನ್ನು ಪೂರೈಸಿದರೆ ಅವನ ನಿಯೋಜನೆ ಅಥವಾ ಅಂಥ ನಿಯೋಜನೆಯಲ್ಲಿ ಮಾಡಿದ ಕೆಲಸಕ್ಕೆ ಸಂಬಂಧಿಸಿದಂತೆ ನಿಯೋಜಿತನಾದ ವ್ಯಕ್ತಿಗೆ ಸಂದಾಯ ಮಾಡಬೇಕಾಗಿದೆಯೋ ಆ ಹಣದ ರೂಪದಲ್ಲಿ ವ್ಯಕ್ತಿಪಡಿಸಬಹುದಾದ ಎಲ್ಲಾ ಪರಿಶ್ರಮಧನ ;
   1. ಆದರೆ ಇದು :-
    1. ಯಾವುದೇ ವಸತಿ ಸ್ಥಳಾವಕಾಶ, ದೀಪ ನೀರು ಸರಬರಾಜು, ವೈದ್ಯಕೀಯ ಚಿಕಿತ್ಸೆ ; ಅಥವಾ
    2. ರಾಜ್ಯ ಸರ್ಕಾರದ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಹೊರತುಪಡಿಸಿದ ಇತರ ಯಾವುದೇ ಸೇವೆ- ಇವುಗಳ ಮೌಲ್ಯವನ್ನು ;
   2. ಯಾವುದೇ ಪಿಂಚಣಿ ನಿಧಿಗೆ ಅಥವಾ ಭವಿಷ ನಿಧಿಗೆ ಅಥವಾ ಸಾಮಾಜಿಕ ವಿಮೆಯ ಯಾವುದೇ ಯೋಜನೆಯ ಮೇರೆಗೆ ನಿಯೋಜಕನು ಸಂದಾಯ ಮಾಡಿದ ಯಾವುದೇ ವಂತಿಗೆಯನ್ನು;
   3. ಯಾವುದೇ ಪ್ರಯಾಣ ಭತ್ಯ ಅಥವಾ ಯಾವುದೇ ಪ್ರಯಾಣ ರಿಯಾಯಿತಿಯ ಮೌಲ್ಯವನ್ನು;
   4. ನಿಯೋಜಿತನಾದ ವ್ಯಕ್ತಿಗೆ ಅವನ ನಿಯೋಜನೆಯ ಸ್ವರೂಪದಿಂದಾಗಿ ತಗಲುವ ವಿಶೇಷ ವೆಚ್ಚಗಳನ್ನು ಭರಿಸುವ ಸಲುವಾಗಿ ಸಂದಾಯ ಸಂದಾಯ ಮಾಡಿದ ಯಾವುದೇ ಮೊತ್ತ; ಅಥವಾ
   5. ಸೇವೆಯಿಂದ ಬಿಡುಗಡೆಯಾದ ಮೇಲೆ ಸಂದಾಯ ಮಾಡಬೇಕಾದ ಯಾವುದೇ ಉಪದಾನವನ್ನು,-- ಒಳಗೊಳ್ಳುವುದಿಲ್ಲ.
  13. “ ಕಲ್ಯಾಣ ಆಯುಕ್ತರು ” ಎಂದರೆ 12ನೇ ಪ್ರಕರಣದ ಮೇರೆಗೆ ನೇಮಕಗೊಂಡ ಕಲ್ಯಾಣ ಆಯುಕ್ತರು ;
 3. ಕಲ್ಯಾಣ ನಿಧಿ
  1. ರಾಜ್ಯ ಸರ್ಕಾರವು, ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಎಂದು ಕರೆಯಲಾಗುವ ಒಂದು ನಿಧಿಯನ್ನು ರಚಿಸತಕ್ಕುದು ಮತ್ತು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಅಥವಾ ಯಾವುದೇ ಕರಾರಿನಲ್ಲಿ ಅಥವಾ ಲಿಖಿತದಲ್ಲಿ ಏನೇ ಅಡಕವಾಗಿದ್ದಾಗ್ಯೂ, ಸಂದಾಯ ಮಾಡಿಲ್ಲದ ಎಲ್ಲ ಸಂಚಯಗಳನ್ನು ಮಂಡಲಿಗೆ ಸಂದಾಯ ಮಾಡತಕ್ಕುದು. ಅದು. ಅದಕ್ಕೆ ಸಂಬಂಧಿಸಿದ ಕ್ಲೇಮಗಳು 7ನೇ ಪ್ರಕರಣದಲ್ಲಿ ಉಪಬಂಧಿಸಿದ ರೀತಿಯಲ್ಲಿ ಅದಕ್ಕಾಗಿನ ಕ್ಲೇಮುಗಳನ್ನು ತೀರ್ಮಾನಿಸುವವರೆಗೆ, ಅದಕ್ಕಾಗಿ ಪ್ರತ್ಯೇಕವಾದ ಲೆಕ್ಕವನ್ನಿಡತಕ್ಕುದು ಮತ್ತು (2)ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಇತರ ಮೊತ್ತವನ್ನು ಆ ನಿಧಿಗೆ ಸಂದಾಯ ಮಾಡತಕ್ಕುದು.
  2. ನಿಧಿಯು :-
   1. ನಿಯೋಜಿತರಿಂದ ವಸೂಲು ಮಾಡಿದ ಎಲ್ಲ ಜುಲ್ಮಾನೆಗಳು :
   2. 7ನೇ ಪ್ರಕರಣದ ಮೇರೆಗೆ ನಿಧಿಗೆ ವರ್ಗಾಯಿಸಲಾದ ಸಂದಾಯ ಮಾಡಿಲ್ಲದ ಎಲ್ಲ ಸಂಚಯಗಳು :-
    1. 7ಕ ಪ್ರಕರಣದ ಮೇರೆಗೆ ಸಂದಾಯ ಮಾಡಿದ ವಂತಿಗೆ :
    2. 7ಖ ಪ್ರಕರಣದ ಮೇರೆಗೆ ಸಂದಾಯ ಮಾಡಿದ ಯಾವುದೇ ದಂಡ ರೂಪದ ಬಡ್ಡಿ.
   3. ಯಾವುದೇ ಸ್ವಇಚ್ಚೆಯಿಂದ ಮಾಡಿದ ದೇಣಿಗೆಗಳು ;
   4. 8ನೇ ಪ್ರಕರಣ (5)ನೇ ಉಪ-ಪ್ರಕರಣದ ಮೇರೆಗೆ ವರ್ಗಾಯಿಸಲಾದ ಯಾವುದೇ ನಿಧಿ ಮತ್ತು ;
   5. 9ನೇಯ ಪ್ರಕರಣದ ಮೇರೆಗೆ ಸಾಲವಾಗಿ ಪಡೆಯಲಾದ ಯಾವುದೇ ಮೊತ್ತ ಇವುಗಳನ್ನು ಒಳಗೊಂಡಿರತಕ್ಕುದು.
  3. (2)ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಮೊತ್ತಗಳನ್ನು ನಿಯಮಿಸಬಹುದಾದಂಥ ಏಜನ್ಸಿಗಳು ; ಮತ್ತು ಅಂಥ ರೀತಿಯಲ್ಲಿ ಸಂಗ್ರಹಿಸತಕ್ಕುದು ಮತ್ತು ನಿಧಿಯ ಲೆಕ್ಕಪತ್ರಗಳನ್ನು ಇಟ್ಟುಕೊಂಡು ಬರತಕ್ಕುದು ಮತ್ತು ಅವುಗಳ ಲೆಕ್ಕ ಪರಿಶೋಧನೆ ಮಾಡಸತಕ್ಕುದು.
 4. ಮಂಡಲಿ
  1. ರಾಜ್ಯ ಸರ್ಕಾರವು, ಸರ್ಕಾರಿ ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ನಿಧಿಯ ನಿರ್ವಹಣೆಯ ಉದ್ದೇಶಕ್ಕಾಗಿ ಮತ್ತು ಈ ಅಧಿನಿಯಮದ ಮೂಲಕ ಅಥವಾ ಅದರ ಅಡಿಯಲ್ಲಿ ಮಂಡಲಿಗೆ ವಹಿಸಿಕೊಟ್ಟಂಥ ಇತರ ಪ್ರಕಾರ್ಯಗಳನ್ನು ನಡೆಸುವುದಕ್ಕೆ ಇಡೀ ಕರ್ನಾಟಕ ರಾಜ್ಯಕ್ಕಾಗಿ ಮಂಡಲಿಯನ್ನು ರಚಿಸತಕ್ಕುದು.
  2. ಮಂಡಲಿಯು ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡಿದ ಈ ಕೆಳಕಂಡ ಸದಸ್ಯರನ್ನು ಒಳಗೊಂಡಿರತಕ್ಕುದು, ಎಂದರೆ :-
   1. ನಿಯೋಜಕರು ಮತ್ತು ನಿಯೋಜಿತರ ಪ್ರತಿನಿಧಿಗಳು ;
   2. ಮಹಿಳೆಯರನ್ನು ಪ್ರತಿನಿಧಿಸುವ ಸ್ವತಂತ್ರ ಸದಸ್ಯರು ; ಮತ್ತು
   3. ಇತರ ಸ್ವತಂತ್ರ ಸದಸ್ಯರು, ಪ್ರತಿಯೊಂದು ಪ್ರವರ್ಗದ ಸದಸ್ಯರ ಸಂಖ್ಯೆಯು ನಿಯಮಿಸ ಬಹುದಾದಂಥದ್ದಾಗಿರತಕ್ಕುದು. ಪರಂತು, ನಿಯೋಜಕ ಮತ್ತು ನಿಯೋಜಿತರಿಬ್ಬರೂ ಮಂಡಲಿಯಲ್ಲಿ ಸಮಾನ ಪ್ರಾತಿನಿಧ್ಯವನ್ನು ಹೊಂದಿರತಕ್ಕುದು.
  3. ಮಂಡಲಿಯ ಸದಸ್ಯರು, ಅದರ ಸ್ವತಂತ್ರಯ ಸದಸ್ಯರ ಪೈಕಿ ಒಬ್ಬನನ್ನು ಮಂಡಲಿಯ ಅಧ್ಯಕನನ್ನಾಗಿ ಚುನಾಯಿಸತಕ್ಕದು.
  4. ಈ ಅಧಿನಿಯಮದ ಮೂಲಕ ಅನ್ಯಥಾ ಸ್ಪಷ್ಟವಾಗಿ ಉಪಬಂಧಿಸಿದ್ದ ಹೊರತು ಮಂಡಲಿಯ ಸದಸ್ಯರ ಪದಾವಧಿಯು, ಸರ್ಕಾರಿ ರಾಜಪತ್ರದಲ್ಲಿ ಅವರ ಹೆಸರುಗಳನ್ನು ಅಧಿಸೂಚಿಸಿದಂಥ ದಿನಾಂಕದಂದು ಪ್ರಾರಂಭವಾಗಿ 3 ವರ್ಷಗಳಾಗಿರತಕ್ಕುದು.
  5. ಮಂಡಲಿಯ ಸದಸ್ಯರಿಗೆ ಸಂದಾಯ ಮಾಡಬೇಕಾದ ಭತ್ಯೆಗಳು ಯಾವುದಾದರೂ ಇದ್ದರೆ ಅವುಗಳು ಮತ್ತು ನಿಯೋಜಕರು ಮತ್ತು ನಿಯೋಜಿತರ ಪ್ರತಿನಿಧಿಗಳ ನೇಮಕಾತಿಯ ಷರತ್ತುಗಳು ನಿಯಮಿಸಬಹುದಾದಂಥವುಗಳಾಗಿರತಕ್ಕುದು.
  6. ಮಂಡಲಿಯು, ಈ ಅಧಿನಿಯಮದ ಉಪಬಂಧಗÀಳಿಗೆ ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳಿಗೊಳಪಟ್ಟು, ಚರ ಮತ್ತು ಸ್ಥಿರ ಸ್ವತ್ತುಗಳೆರಡನ್ನು ಅರ್ಜಿಸಲು, ಧಾರಣ ಮಾಡಲು ಮತ್ತು ವಿಲೆ ಮಾಡಲು ಮತ್ತು ಕರಾರು ಮಾಡಿಕೊಳ್ಳಲು ಅಧಿಕಾರವನ್ನು ಹೊಂದಿದ ಶ್ವಾಶ್ವತ ಉತ್ತರಾಧಿಕಾರವನ್ನು ಮತ್ತು ಸಾಮಾನ್ಯ ಮೊಹರನ್ನು ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯೆಂಬ ಹೆಸರಿನ ಒಂದು ನಿಗಮಿತ ನಿಕಾಯವಾಗಿರತಕ್ಕದು ಮತ್ತು ಅದು ಸದರಿ ಹೆಸರಿನಲ್ಲಿ ದಾವೆ ಹೊಡಬಹುದು ಮತ್ತು ದಾವೆಗೆ ಗುರಿಯಾಗಬಹುದು.
 5. ಅನರ್ಹತೆಗಳು ಮತ್ತು ತೆಗೆದು ಹಾಕುವುದು
  1. ಸಂಬಳ ಪಡೆಯುವ ಮಂಡಲಿಯ ನೌಕರನಾಗಿರುವ ; ಅಥವಾ
   1. ದಿವಾಳಿಯಾದ ಅಥವಾ ಯಾವುದೇ ಸಕಾಲದಲ್ಲಿ ಹಾಗೆಂದು ನ್ಯಾಯ ನಿಣೀತನಾದ ಅಥವಾ ಅವನ ಋಣಗಳ ಸಂದಾಯವನ್ನು ತಡೆಹಿಡಿದಿರುವ ಅಥವಾ ಅವನಿಗೆ ಸಾಲ ಕೊಟ್ಟಿರುವವರೊಂದಿಗೆ ರಾಜಿ ಮಾಡಿಕೊಂಡಿರುವ ; ಅಥವಾ
   2. ಮನೋವಿಕಲನಾಗಿರುವುದಾಗಿ ಕಂಡು ಬಂದ ಅಥವಾ ಅಸ್ವಸ್ಥಚಿತ್ತನಾಗುವ ಅಥವಾ
   3. ನಿರ್ಣೀತ ಅಪರಾಧಿಯಾಗುವ ಅಥವಾ ನೈತಿಕ ಆದ : ಪತನವನ್ನೊಳಗೊಂಡ ಯಾವುದೇ ಅಪರಾಧದ ಬಗ್ಗೆ ಅಪರಾಧಿ ಎಂದು ನಿರ್ಣೀತನಾಗಿರುವ ನಿರ್ಧೇಶಿತನಾದ--ಯಾವನೇ ವ್ಯಕ್ತಿಯನ್ನು ಮಂಡಲಿಯ ಸದಸ್ಯನನ್ನಾಗಿ ಆಯ್ಕೆ ಮಾಡತಕ್ಕುದಲ್ಲ. ಅಥವಾ ಹಾಗೇಂದು ಅವನನ್ನು ಮುಂದುವರಿಸತಕ್ಕುದಲ್ಲ.
  2. ರಾಜ್ಯ ಸರ್ಕಾರವು ;
   1. (1) ನೇ ಉಪ- ಪ್ರಕರಣದಲ್ಲಿ ನಮೂದಿಸಿರುವ ಯಾವುದೇ ಅನರ್ಹತೆಗೆ ಒಳಪಟ್ಟಿರುವ ಅಥವಾ ಒಳಪಡುವ ; ಅಥವಾ
   2. ಮಂಡಳಿಯು ಅನುಮತಿ ಇಲ್ಲದೆ, ಮಂಡಲಿಯು ಮೂರು ಅನುಕ್ರಮ ಸಭೆಗಳಿಗಿಂತ ಹೆಚ್ಚು ಸಭೆಗಳಿಗಿಂತ ಹೆಚ್ಚು ಸಭೆಗಳಿಗೆ ಗೈರು ಹಾಜರಾಗುವ. -- ಯಾವನೇ ಸದಸ್ಯನನ್ನು ಪದದಿಂದ ತೆಗೆದು ಹಾಕಬಹುದು.
 6. ಸದಸ್ಯನಿಂದ ರಾಜೀನಾಮೆ ಮತ್ತು ಆಕಸ್ಮಿಕ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವುದು :-
  1. ಸದಸ್ಯನು ಅವನ ಸದಸ್ಯತ್ವಕ್ಕೆ ರಾಜ್ಯ ಸರ್ಕಾರಕ್ಕೆ ಬರಹದಲ್ಲಿ ಅದರ ಬಗ್ಗೆ ನೋಟಿಸು ಕೊಡುವ ಮೂಲಕ ರಾಜೀನಾಮೆ ಕೊಡಬಹುದು ಮತ್ತು ಅಂಥ ರಾಜೀನಾಮೇಯನ್ನು ಅಂಗೀಕರಿಸಿದ ಮೇಲೆ ಅವನು ಅವನ ಪದವನ್ನು ತೆರವು ಮಾಡಿರುವುದಾಗಿ ಭಾವಿಸತಕ್ಕುದು-
  2. ಸದಸ್ಯನ ಪದದಲ್ಲಿನ ಆಕಸ್ಮಿಕ ಖಾಲಿ ಸ್ಥಾನವನ್ನು ಸಂಬಂಧಪಟ್ಟ ಪ್ರಾಧಿಕಾರಿಯು ಅನುಕೂಲವಾದಷ್ಟು ಬೇಗನೇ ಭರ್ತಿ ಮಾಡತಕ್ಕುದು ಮತ್ತು ಹಾಗೆ ನಾಮ ನಿರ್ದೇಶಿತನಾದ ಸದಸ್ಯನ ಪೂರ್ವಾಧಿಕಾರಿಯ ಪದದ ಮುಕ್ತಾಯವಾಗದೇ ಇರುವ ಭಾಗಕ್ಕಾಗಿ ಪದಧಾರಣ ಮಾಡತಕ್ಕುದು.
  3. ಮಂಡಲಿಯ ಯಾವುದೇ ಕಾರ್ಯ ಅಥವಾ ವ್ಯವಹರಣೆಗಳನ್ನು ಮಂಡಲಿಯಲ್ಲಿ ಖಾಲಿಸ್ಥಾನ ಇತ್ತೆಂಬ ಅಥವಾ ಮಂಡಲಿಯ ರಚನೆಯಲ್ಲಿ ಯಾವುದೇ ನ್ಯೂನತೆ ಇತ್ತೇಂಬ ಕಾರಣ ಮಾತ್ರದಿಂದಲೇ ಪ್ರಶ್ನಿಸತಕ್ಕುದಲ್ಲ.
 7. ಸಂದಾಯ ಮಾಡಿಲ್ಲದ ಸಂಚಯಗಳು ಮತ್ತು ಅವುಗಳ ಬಗ್ಗೆ ಕ್ಲೇಮುಗಳು
  1. ಸಂದಾಯ ಮಾಡಿಲ್ಲದ ಎಲ್ಲ ಸಂಚಯಗಳನ್ನು ಪರಿತ್ಯಜಿಸಿದ ಸ್ವತ್ತೆಂಬುದಾಗಿ ಭಾವಿಸತಕ್ಕುದು.
  2. 3ನೇ ಪ್ರಕರಣದ ಉಪಬಂಧಗಳಿಗನುಸಾರವಾಗಿ, ಮಂಡಲಿಗೆ ಸಂದಾಯ ಮಾಡಿದ ಯಾವುದೇ ಸಂದಾಯ ಮಾಡಿಲ್ಲದ ಸಂಚಯಗಳು ಅಂಥ ಸಂದಾಯ ಮಾಡಿದ ಮೇಲೆ, ಅದಕ್ಕೆ ಸಂಬಂಧಿಸಿದಂತೆ ನಿಯೋಜಿತನಿಗೆ ಸಂದಾಯ ಮಾಡುವ ಹೊಣೆಗಾರಿಕೆಯಿಂದ ನಿಯೋಜಿತನನ್ನು ವಿಮೋಚನೆ ಗೊಳಿಸತಕ್ಕುದು. ಆದರೆ ಇದು ಮಂಡಲಿಗೆ ಸಂದಾಯದ ಮೊಬಬಲಗಿಗೆ ಮಾತ್ರ ವ್ಯಾಪ್ತವಾಗುತ್ತದೆ. ಹಿಂದೆ ಹೇಳಿದಂತೆ ವ್ಯಾಪ್ತವಾಗುವಷ್ಟರ ಮಟ್ಟಿಗೆ ನಿಯೋಜಿತನಿಗೆ ಮಾಡ ಬೇಕಾದ ಹೊಣೆಗಾರಿಕೆಯು ಈ ಪ್ರಕರಣದ ಮುಂಬರುವ ಉಪಬಂಧಗಳಿಗೊಳಪಟ್ಟು ಮಂಡಲಿಗೆ ವರ್ಗಾಯಿತವಾಗಿರುವುದಾಗಿ ಭಾವಿಸತಕ್ಕುದು.
  3. ಯಾವುದೇ ಸಂದಾಯ ಮಾಡಿಲ್ಲದ ಸಂಚಯಗಳು ಮಂಡಲಿಗೆ ಸಂದಾಯ ಮಾಡಿದ ತರುವಾಯ ಸಾಧ್ಯವಾದಷ್ಟು ಬೇಗ, ಮಂಡಲಿಯು :-
   1. ಯಾವ ಕಾರ್ಖಾನೆ ಅಥವಾ ಕಾರ್ಯ ಸಂಸ್ಥೆಯಲ್ಲಿ ಸಂದಾಯ ಮಾಡಿಲ್ಲದ ಸಂಚಯವನ್ನು ಗಳಿಸಲಾಗಿತ್ತೋ ಆ ಕಾರ್ಖಾನೆ ಅಥವಾ ಕಾರ್ಯ ಸಂಸ್ಥೆಯ ನೋಟೀಸು ಭೋರ್ಡಿನ ಮೇಲೆ ಪ್ರದರ್ಶಿಸಿದ ಮತ್ತು ;
   2. ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ, ಮತ್ತು :
   3. ಯಾವ ಪ್ರದೇಶದಲ್ಲಿ ಯಾವ ಕಾರ್ಖಾನೆ ಅಥವಾ ಕಾರ್ಯ ಸಂಸ್ಥೆಯಲ್ಲಿ ಸಂದಾಯ ಮಾಡಿಲ್ಲದ ಸಂಚಯವನ್ನು ಗಳಿಸಲಾಯಿತ್ತೋ ಆ ಕಾರ್ಖಾನೆ ಅಥವಾ ಕಾರ್ಯ ಸಂಸ್ಥೆಯು ಇರುವ ಪ್ರದೇಶದಲ್ಲಿ ಪ್ರಸಾರದಲ್ಲಿರುವ ಯಾವುದೇ ಎರಡು ವೃತ್ತ ಪತ್ರಿಕೆಗಳಲ್ಲೂ ಸಹ ಪ್ರಕಟವಾಗುವ ಅಥವಾ ಕ್ಲೇಮಿನ ಮೊಬಲಗನ್ನು ಗಮನಕ್ಕೆ ತೆಗೆದುಕೊಂಡು ನಿಯಮಿಸಬಹುದಾದಂಥ ಇತರ ರೀತಿಯಲ್ಲಿ ಪ್ರಕಟಿಸಿದ ನೋಟಿಸಿನ ಮೂಲಕ (ನಿಯಮಿಸಬಹುದಾದಂಥ ವಿವರಗಳನ್ನು ಒಳಗೊಂಡಿರುವ) ನಿಯೋಜಿತರಿಗೆ ಬಾಕಿಯಾದ ಯಾವುದೇ ಸಂದಾಯಕ್ಕಾಗಿ ಅವರಿಂದ ಕ್ಲೇಮುಗಳನ್ನು ಅಹ್ವಾನಿಸತಕ್ಕದು. ಪ್ರತಿ ವರ್ಷ ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹಿಂದೆ ಹೇಳಿದಂಥ ರೀತಿಯಲ್ಲಿ ಮಂಡಲಿಗೆ ಸಂದಾಯ ಮಾಡಿಲ್ಲದ ಸಂಚಯದ ಸಂದಾಯದ ದಿನಾಂಕದಿಂದ ಮೂರು ವರ್ಷಗಳ ಅವಧಿಗಾಗಿ ಪ್ರಕಟಿಸತಕ್ಕುದು.
  4. ನೇ ಉಪ-ಪ್ರಕರಣದಲ್ಲಿ ಉಲ್ಲೇಖಿಸಿದ ನೋಟಿಸನ್ನು ಆ ಉಪ-ಪ್ರಕರಣದ ಮೂಲಕ ಅಗತ್ಯ - ಪಡಿಸಿದಂತೆ ಕೊಡಲಾಗಿತ್ತೋ ಹೇಗೆ ಎಂಬ ಯಾವುದೇ ಪ್ರಶ್ನೇಯು ಉದ್ಭವಿಸಿದರೆ, ಅದನ್ನು ಹಾಗೆ ಕೊಡಲಾಗಿತ್ತೆಂಬ ಬಗ್ಗೆ ಮಂಡಲಿಯ ಪ್ರಮಾಣ ಪತ್ರವು ನಿರ್ಣಾಯಕವಾಗಿರತಕ್ಕುದು.
  5. ಅಂಥ ಕ್ಲೇಮಿಗೆ ಸಂಬಂಧಿಸಿದಂತೆ ನೋಟಿಸಿನ ಮೊದಲ ಪ್ರಕರಣೆಯ ದಿನಾಂಕದಿಂದ ನಾಲ್ಕು ವರ್ಷಗಳ ಅವಧಿಯೊಳಗೆ ನೋಟಿಸುಗಳಿಗೆ ಉತ್ತರವಾಗಿಯೇ ಆಗಲಿ ಅಥವಾ ಅನ್ಯಥಾ ಆಗಲಿ ಕ್ಲೇಮನ್ನು ಸ್ವೀಕರಿಸಿದರೆ ಮಂಡಲಿಯು, ಅಂಥ ಕ್ಲೇಮನ್ನು ಆ ಕಾರ್ಖಾನೆ ಅಥವಾ ಕಾರ್ಯ ಸಂಸ್ಥೆಯು ಇರುವಂಥ 15ನೇ ಪ್ರಕರಣದ ಮೇರೆಗೆ ನೇಮಕ ಮಾಡಲಾದ ಪ್ರದೇಶದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಮಜೂರಿ ಸಂದಾಯ ಅಧಿನಿಯಮ 1936 ರ ಪ್ರಾಧಿಕಾರಿಗೆ ವರ್ಗಾಯಿಸತಕ್ಕುದು ಮತ್ತು ಆ ಪ್ರಾಧಿಕಾರಿಯು ಅಂಥ ಕ್ಲೇಮಿನ ಬಗ್ಗೆ ನ್ಯಾಯ ನಿರ್ಣಯ ಮಾಡಲು ಮತ್ತು ತೀರ್ಮಾನಿಸಲು ಮುಂದುವರಿಯತಕ್ಕುದು. ಅಂಥ ಕ್ಲೇಮನ್ನು ಚುನಾವಣೆ ಮಾಡುವಲ್ಲಿ ಆ ಪ್ರಾಧಿಕಾರಿಯು ಆ ಅಧಿನಿಯಮದ ಉಪಬಂಧುಗಳ ಮೂಲಕ ಪ್ರಧಾನ ಮಾಡಿದ ಅಧಿಕಾರಿಗಳನ್ನು ಹೊಂದಿರತಕ್ಕುದು ಮತ್ತು ಅವುಗಳನ್ನು ಜಾರಿಗೊಳಿಸುವಲ್ಲಿ ಅನುಸರಿಸಬೇಕಾದ ಪ್ರಕ್ರಿಯೆಯನ್ನು ( ಅದು ಅನ್ವಯವಾಗಬ ಹುದಾದಷ್ಟರ ಮಟ್ಟಿಗೆ ) ಅನುಸರಿಸತಕ್ಕುದು.
  6. ಹಿಂದೆ ಹೇಳಿದ ಪ್ರಾಧಿಕಾರಿಗೆ ಅಂಥ ಯಾವುದೇ ಕ್ಲೇಮು ಸಂದಾಯವನ್ನು ಸ್ವೀಕರಿಸುವ ಹಕ್ಕು ಸ್ಥಾಪಿತವಾಗಿರುವ ಹಾಗೆ ಸಿಂದುವಾಗಿದೆಯೆಂದು ಮನದಟ್ಟಾದರೆ, ಅವನು ಯಾವುದಕ್ಕೆ ಸಂಬಂಧಪಟ್ಟಂತೆ ಆ ಕ್ಲೇಮನ್ನು ಮಾಡಲಾಗಿದೆಯೋ ಆ ಸಂದಾಯವಾಗಿಲ್ಲದ ಸಂಚಯವು ಪರಿತ್ಯಜಿಸಿದ ಸ್ವತ್ತೆಂಬುದಾಗಿ ಭಾವಿಸುವುದು ನಿಂತು ಹೋಗತಕ್ಕುದೆಂದು ತೀರ್ಮಾನಿಸತಕ್ಕುದು ಮತ್ತು ಕ್ಲೇಮು ಮಾಡಲಾದ ಬಾಕಿಗಳ ಒಟ್ಟುನ್ನು ಅಥವಾ ಪ್ರಾಧಿಕಾರಿಯು ಸರಿಯಾಗಿ ಬಾಕಿಯಿದೆ ಎಂದು ತೀರ್ಮಾನಿಸಿದಂತೆ ಅದರ ಅಂಥ ಭಾಗವÀನ್ನು ನಿಯೋಜಿತರಿಗೆ ಸಂದಾಯ ಮಾಡಲು, ಮಂಡಲಿಗೆ ಆದೇಶಿಸತಕ್ಕುದು ಮತ್ತು ಮಂಡಲಿಯು ತದನುಸಾರವಾಗಿ ಸಂದಾಯವನ್ನು ಮಾಡತಕ್ಕುದು.

   ಪರಂತು, ಮಂಡಲಿಯು ಆ ಕ್ಲೇಮಿನ ಸಂಬಂಧದಲ್ಲಿ ಸಂದಾಯ ಮಾಡಿಲ್ಲದ ಸಂಚಯಗಳೆಂದು 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೇರೆಗೆ, ಸಂದಾಯ ಮಾಡಿದುದಕ್ಕಿಂತ ಹೆಚ್ಚಿನ ಯಾವುದೇ ಮೊತ್ತವನ್ನು ಸಂದಾಯ ಮಾಡಲು ಹೊಣೆಯಾಗಿರತಕ್ಕುದಲ್ಲ.

  7. ಸಂದಾಯಕ್ಕಾಗಿನ ಕ್ಲೇಮನ್ನು ತಿರಸ್ಕರಿದರೆ, ಆ ನಿಯೋಜಿತನ್ನು, ಆ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲಾ ನ್ಯಾಯಲಯಕ್ಕೆ ಅಪೀಲನ್ನು ಮಾಡಿಕೊಳ್ಳುವ ಹಕ್ಕನ್ನು ಹೊಂದಿರತಕ್ಕುದು. ಮತ್ತು ಮಂಡಲಿಯು ಅಪೀಲಿನಲ್ಲಿ ಮಾಡಿದ ಯಾವುದೇ ಆದೇಶವನ್ನು ಪಾಲಿಸತಕ್ಕುದು. ಆ ಪ್ರಾಧಿಕಾರಿಯ ತೀರ್ಮಾನದ ಅರವತ್ತು ದಿವಸಗಳೊಳಗಾಗಿ ಅಪೀಲನ್ನು ಸಲ್ಲಿಸತಕ್ಕುದು.
  8. ಆ ಪ್ರಾಧಿಕಾರಿಯ ತೀರ್ಮಾನವು ಹಿಂದೆ ಹೇಳಿದ ಅಪೀಲಿಗೆ ಮತ್ತು ಜಿಲ್ಲಾ ನ್ಯಾಯಾಲಯದ ಅಪೀಲಿನಲ್ಲಿ ತೀರ್ಮಾನಕ್ಕೆ ಒಳಪಟ್ಟು ಸಂದಾಯವನ್ನು ಸ್ವೀಕರಿಸುವ ಹಕ್ಕು ಸಂದಾಯ ಮಾಡಲು ಮಂಡಲಿಯ ಹೊಣೆಗಾರಿಕೆಯ ಬಗ್ಗೆ ಮತ್ತು ಆ ಮೊಬಲಗು ಯಾವುದಾದರೂ ಇದ್ದರೆ, ಅದರ ಬಗ್ಗೆಯೂ ಸಹ ಅಂತಿಮವಾಗಿರತಕ್ಕುದು.
  9. 5ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಯಾವುದೇ ಕ್ಲೇಮನ್ನು ಮಾಡದಿದ್ದರೆ, ಅಥವಾ ಪ್ರಾಧಿಕಾರಿಯು ಹಿಂದೆ ಹೇಳಿದಂತೆ ಅಥವಾ ಅಪೀಲಿನಲ್ಲಿ ನ್ಯಾಯಾಲಯವು ಕ್ಲೇಮನ್ನು ನಿರಾಕರಿಸಲಾಗಿದ್ದರೆ, ಆಗ ಅಂಥ ಕ್ಲೇಮಿಗೆ ಸಂಬಂಧಿಸಿದಂತೆ ಸಂದಾಯ ಮಾಡಿಲ್ಲದ ಸಂಚಯಗಳು ಸ್ವಾಮ್ಯರಹಿತವಾದುದೆಂದು ರಾಜ್ಯ ಸರ್ಕಾರಕ್ಕೆ ಒದಗಿಬರತಕ್ಕುದು ಮತ್ತು ಅದರಲ್ಲಿ ನಿಹಿತವಾಗತಕ್ಕುದು ಮತ್ತು ಆ ತರುವಾಯ ಹಸ್ತಾಂತರಣ ಪತ್ರವಿಲ್ಲದೆ ನಿಧಿಗೆ ವರ್ಗಾವಣೆಯಾಗಿರುವುದಾಗಿ ಭಾವಿಸತಕ್ಕುದು ಮತ್ತು ಅದರ ಭಾಗವಾಗಿರತಕ್ಕುದು.
  1. 7ಕ. ವಂತಿಗೆ
   1. ಕಾರ್ಯ ಸಂಸ್ಥೆಯಲ್ಲಿರುವ ಪ್ರತಿಯೊಬ್ಬ ನಿಯೋಜಿತನಿಗೆ ಸಂಬಂಧಿಸಿದಂತೆ ಅನುಕ್ರಮವಾಗಿ, ನಿಯೋಜಕ, ನಿಯೋಜಿತ ಮತ್ತು ರಾಜ್ಯ ಸರ್ಕಾರದಿಂದ ಸಂದಾಯವಾಬೇಕಾದ ನಿಯೋಜಕನ ವಂತಿಗೆ, ನಿಯೋಜಿತರ ವಂತಿಗೆ ಮತ್ತು ರಾಜ್ಯ ಸರ್ಕಾರದ ವಂತಿಗೆ, ಇವುಗಳನ್ನು ಒಳಗೊಂಡ ವಂತಿಗೆಯನ್ನು ಮಂಡಲಿಗೆ, ಸಂದಾಯ ಮಾಡತಕ್ಕದು ಮತ್ತು ಹಾಗೆ ಸಂದಾಯ ಮಾಡಿದ ವಂತಿಗೆಗಳು ಆ ನಿಧಿಯ ಭಾಗವಾಗತಕ್ಕುದು.
   2. ಯಾವುದೇ ವರ್ಷದ ಡಿಸೆಂಬರ 31 ರಂದು ಕಾರ್ಯ ಸಂಸ್ಥೆಯ ರಿಜಿಸ್ಟರಿನಲ್ಲಿ ಹೆಸರು ಇರುವ ಪ್ರತಿಯೋಬ್ಬ ನಿಯೋಜಿತನಿಗೆ ಸಂಬಂಧಿಸಿದಂತೆ, ಸಂಬಂಧಪಟ್ಟ ನಿಯೋಜಿತ ಮತ್ತು ರಾಜ್ಯ ಸರ್ಕಾರವು ಆ ವರ್ಷಕ್ಕಾಗಿ 6 ರೂಪಾಯಿ, 12 ರೂಪಾಯಿಗಳು ಅಥವಾ 6 ರೂಪಾಯಿಯ ಮೊತ್ತವನ್ನು ಅನುಕ್ರಮವಾಗಿ ವಂತಿಗೆಯೆಂದು ಸಂದಾಯಮಾಡತಕ್ಕುದು.
   3. ಯಾವುದೇ ವರ್ಷಕ್ಕೆ ಸಂಬಂಧಿಸಿದಂತೆ ನಿಯೋಜಕನ ವಂತಿಗೆ ಮತ್ತು ನಿಯೋಜಿತನ ವಂತಿಗೆಯನ್ನು ನಿಯೋಜಕನು ಮುಂಬರುವ ವರ್ಷದ ಜನವರಿ 15 ರಂದು ಅಥವಾ ಅದಕ್ಕೆ ಮುಂಚೆ ಕ್ರಾಸ್ಡ ಚೆಕ್ ಅಥವಾ ಕ್ರಾಸ್ಡ್ ಹುಂಡಿ ರೂಪದಲ್ಲಿ ಮಂಡಲಿಗೆ ಸಂದಾಯ ಮಾಡತಕ್ಕುದು ಮತ್ತು ವಂತಿಗೆಯನ್ನು ಜಮ ಮಾಡುವುದರ ವೆಚ್ಚಗಳನ್ನು ನಿಯೋಜಕನು ಸ್ವತ : ಭರಿಸತಕ್ಕುದು.
   4. ಯಾವುದೇ ಇತರ ಅಧಿನಿಯಮಿತಿಯಲ್ಲಿ ಏನೇ ಅಡಕವಾಗಿದ್ದಾಗ್ಯೂ, ಅದರ ಈ ಅಧಿನಿಯಮದ ಉಪಬಂಧಗಳು ಮತ್ತು ಅದರ ಅಡಿಯಲ್ಲಿ ರಚಿಸಿದ ಯಾವುದೇ ನಿಯಮಗಳಿಗೊಳಪಟ್ಟು ನಿಯೋಜಕನ ನಿಯೋಜಿತನ ವಂತಿಗೆಯನ್ನು ನಿಯೋಜಿತನಿಂದ, ಅವನ ಮಜೂರಿಗಳಿಂದ ಕಳೆದುಕೊಳ್ಳುವ ಮೂಲಕ ವಸೂಲು ಮಾಡುವ ಹಕ್ಕುಳ್ಳವನಾಗಿರತಕ್ಕುದು ಮತ್ತು ಅನ್ಯಥಾ ಅಲ್ಲ ಮತ್ತು ಅಂಥ ಕಳೆತವನ್ನು ಮಜೂರಿಗಳ ಸಂದಾಲಯ ಅಧಿನಿಯಮ 1936 ರ ಮೂಲಕ ಅಥವಾ ಅದರ ಮೇರೆಗೆ ಅಧಿಕೃತ ಗೊಳಿಸಲಾದುದು ಎಂದು ಭಾವಿಸತಕ್ಕುದು.

    ಪರಂತು, ಯಾವುದೇ ಅಂಥ ಕಳೆತವನ್ನು ನಿಯೋಜಿತನು ಸಂದಾಯ ಮಾಡಬೇಕಾದ ವಂತಿಗೆಯ ಮೊಬಲಗಿಗಿಂತ ಹೆಚ್ಚಿಗೆಯಾಗಿ ಮಾಡತಕ್ಕುದಲ್ಲ ಮತ್ತು ಅ ವಂತಿಗೆಯು ಯಾವ ವರ್ಷಕ್ಕೆ ಸಂಬಂಧಪಡುವುದೋ ಆ ವರ್ಷದ ಡಿಸೆಂಬರ ತಿಂಗಳಿಗಾಗಿನ ಮಜೂರಿಗಳನ್ನು ಹೊರತುಪಡಿಸಿ, ಇತರ ಯಾವುದೇ ಮಜೂರಿಗಳಿಂದ ಅದನ್ನು ಕಳೆಯತಕ್ಕುದಲ್ಲ.

    ಮತ್ತು ಪರಂತು, ಅಜಾಗರೂಕತೆಯಿಂದಾಗಿ ಅಥವಾ ಅನ್ಯಥಾ ಹಿಂದೆ ಹೇಳಿದಂತೆ ಆ ತಿಂಗಳಿಗಾಗಿ ನಿಯೋಜಿತನ ಮಜೂರಿಗಳಿಂದ ಯಾವುದೇ ಕಳೆತವನ್ನು ಮಾಡಿರದಿದ್ದರೆ ಅಂಥ ಕಳೆತವನ್ನು ಅಂಥ ನಿಯೋಜಿತನ ಯಾವುದೇ ತರುವಾಯದ ತಿಂಗಳು ಅಥವಾ ತಿಂಗಳುಗಳಿಗಾಗಿನ ಮಜೂರಿಗಳಿಂದ ಈ ಅಧಿನಿಯಮದ ಮೇರೆಗೆ ನೇಮಕಗೊಂಡ ಪರೀಶೀಲಕರ ಬರಹದಲ್ಲಿನ ಅನುಮತಿಯನ್ನು ಪಡೆದು ಮಾಡಬಹುದು.

   5. ಯಾವುದೇ ಒಪ್ಪಂದ ಅಥವಾ ಕರಾರಿನಲ್ಲಿ ತದ್ವಿರುದ್ದವಾದುದು ಏನೇ ಇದ್ಯಾಗ್ಯೂ, ಯಾವನೇ ನಿಯೋಜಕನು ನಿಯೋಜಕನ ವಂತಿಗೆಯನ್ನು ನಿಯೋಜಿತನಿಗೆ ಸಂದಾಯ ಮಾಡಬೇಕಾದ ಯಾವುದೇ ಮಜೂರಿಗಳಿಂದ ಕಳೆಯತಕ್ಕುದಲ್ ಅಥವಾ ನಿಯೋಜಿತನಿಂದ ಅದನ್ನು ಅನ್ಯಥಾ ವಸೂಲು ಮಾಡತಕ್ಕುದಲ್ಲ.
    * ಕರ್ನಾಟಕ ರಾಜ್ಯ ಪತ್ರ ದಿನಾಂಕ 15-03-1994 ರಲ್ಲಿರುವಂತೆ ಮನಿ ಆರ್ಡರ್ ಮೂಲಕ ಅಥವಾ ನಗದು ಎಂಬ ಶಬ್ದಗಳಿಗೆ ಕ್ರಾಸ್ಡ್ ಹುಂಡಿ ಎಂದು ಸೇರಿಸುವುದು.
   6. ಈ ಪ್ರಕರಣದ ಮೇರೆಗೆ ನಿಯೋಜಿತನ ಮಜೂರಿಗಳಿಂದ ನಿಯೋಜಿತನು ಕ್ರಮಬದ್ದವಾಗಿ ಕಳೆದ ಯಾವುದೇ ಮೊತ್ತವನ್ನೂ, ಯಾವುದಕ್ಕೆ ಸಂಬಂಧಿಸಿದಂತೆ ಅದನ್ನು ಕಳೆಯಲಾಯಿತೋ ಆ ವಂತಿಗೆಯನ್ನು ಸಂದಾಯ ಮಾಡುವ ಉದ್ದೇಶಕ್ಕಾಗಿ ನಿಯೋಜಿತನಿಂದ ಅವನಿಗೆ ವಹಿಸಿ ಕೊಡಲಾದುದೆಂದು ಭಾವಿಸತಕ್ಕುದು.
   7. ಕಲ್ಯಾಣ ಆಯುಕ್ತರು ಸಾಧ್ಯವಾದಷ್ಟು ಬೇಗನೆ ಪ್ರತಿ ವರ್ಷವೂ ಜನವರಿ ಮುಗಿದ ತರುವಾಯ ನಿಯಮಿಸಿದ ನಮೂನೆಯಲ್ಲಿ, ಅವನ ಕಾರ್ಯ ಸಂಸ್ಥೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ನಿಯೋಜಿತನ ವಂತಿಗೆಯ ಒಟ್ಟು ಮೊಬಲಗನ್ನು ತೋರಿಸುವ ವಿವರ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕುದು. ಕಲ್ಯಾಣ ಆಯುಕ್ತರು ವಿವರ ಪತ್ರವನ್ನು ಸ್ವೀರಿಸಿದ ಮೇಲೆ, ರಾಜ್ಯ ಸರ್ಕಾರವು ಅಂಥ ಪ್ರತಿಯೊಂದು ಕಾರ್ಯ ಸಂಸ್ಥೆಗೆ ಸಂಬಂಧಿಸಿದಂತೆ ಅದರ ವಂತಿಗೆಯನ್ನು ಮಂಡಲಿಗೆ ಸಂದಾಯ ಮಾಡತಕ್ಕುದು.
  1. 7ಖ. ತಗಾದೆ ನೋಟಿಸಿನ ತರುವಾಯ ಸಂದಾಯ ಮಾಡಿಲ್ಲದ ಸಂಚಯ ಅಥವಾ ಜುಲ್ಮಾನೆಗಳ ಮೇಲಣ ಬಡ್ಡಿ :-
   1. ನಿಯೋಜಕನು ಸಂದಾಯ ಮಾಡಿಲ್ಲದ ಸಂಚಯಗಳ ಯಾವುದೇ ಮೊಬಲಗನ್ನು ಅಥವಾ ನಿಯೋಜಿತರಿಂದ ವಸೂಲು ಮಾಡಿದ ಜುಲ್ಮಾನೆಗಳನ್ನು ಅಥವಾ 7ಕ ಪ್ರಕರಣದ ಮೇರೆಗಿನ ನಿಯೋಜಕರ ಮತ್ತು ನಿಯೋಜಿತರ ವಂತಿಗೆಗಳ ಮೊಬಲಗನ್ನು ಅದನ್ನು ಸಂದಾಯ ಮಾಡಲು, ಈ ಅಧಿನಿಯಮದ ಉಪಬಂಧಗಳ ಮೂಲಕ ಅಥವಾ ಅವುಗಳ ಮೇರೆಗೆ ಅವನನ್ನು ಅಗತ್ಯಪಡಿಸಿದ ಕಾಲದೊಳಗೆ ಮಂಡಲಿಗೆ ಸಂದಾಯ ಮಾಡದಿದ್ದರೆ, ವೆಲ್‍ಫೇರ್ ಕಮಿಷನರನು, ನೋಟಿಸಿನಲ್ಲಿ ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಮೊಬಲಗನ್ನು ಸಂದಾಯ ಮಾಡಲು ಅಂಥ ನಿಯೋಜಕನಿಗೆ ಒಂದು ನೋಟೀಸನ್ನು ಜಾರಿ ಮಾಡುವಂತೆ ಮಾಡಬಹುದು ; ಅದು ಅಂಥ ನೋಟೀಸಿನ ಜಾರಿಯ ದಿನಾಂಕದಿಂದ ಮೂವತ್ತು ದಿವಸಗಳಿಗಿಂತ ಹೆಚ್ಚಿಗೆಯಾಗಿರತಕ್ಕುದಲ್ಲ.
   2. ನಿಯೋಜಕನು ನೋಟಿಸಿನಲ್ಲಿ ಅ ನಿರ್ದಿಷ್ಟಪಡಿಸಿದ ಅವಧಿಯೊಳಗಾಗಿ ಅಂಥ ಯಾವುದೇ ಮೊಬಲಗನ್ನು ಸಂದಾಯ ಮಾಡಲು ತಪ್ಪಿದರೆ ಅವನು. ಆ ಮೊಬಲಗಿನ ಜೊತೆಗೆ ಮಂಡಲಿಗೆ,
    1. ಮೊದಲು ಮೂರು ತಿಂಗಳಿಗಾಗಿ, ಆ ನೋಟೀಸಿಗೆ ಅನುಸಾರವಾಗಿ ಅದನ್ನು ಅವನು ಸಂದಾಯ ಮಾಡಬೇಕಾಗಿದ್ದಂಥ ಕೊನೆಯ ದಿನಾಂಕದ ತರುವಾಯ ಪ್ರತಿಯೊಂದು ಪೂರ್ಣ ತಿಂಗಳಿಗಾಗಿ ಸದರಿ ಮೊಬಲಗಿನ ಬಗ್ಗೆ ವರ್ಷಕ್ಕೆ, ಶೇಕಡಾ ಹನ್ನೇರಡರಂತೆ, ಮತ್ತು
    2. ಆ ತರುವಾಯ ಆ ಮೊಬಲಗನ್ನು ಸಂದಾಯ ಮಾಡಲು ಅವನು ತಪ್ಪುವುದು ಮುಂದುವರಿದ ಕಾಲದಲ್ಲಿ ಪ್ರತಿಯೊಂದು ಪೂರ್ಣ ತಿಂಗಳಿಗಾಗಿ ಆ ಮೊಬಲಗಿನ ಬಗ್ಗೆ ವರ್ಷಕ್ಕೆ ಶೇಕಡಾ ಹದಿನೆಂಟರಂತೆ --- ಸರಳ ಬಡ್ಡಿಯನ್ನು ಸಂದಾಯ ಮಾಡತಕ್ಕುದು.
 8. ನಿಧಿಯನ್ನು ನಿಹಿತಗೊಳಿಸುವುದು ಮತ್ತು ಅದರ ವಿನಿಯೋಗ
  1. ಆ ನಿಧಿಯು ಮಂಡಲಿಯಲ್ಲಿ ನಿಹಿತವಾಗತಕ್ಕದು ಮತ್ತು ಅದು ಈ ಅಧಿನಿಯಮದ ಉಪಬಂಧಗಳಿಗೊಳಪಟ್ಟು, ಅದರ ಉದ್ದೇಶಕ್ಕಾಗಿ ನ್ಯಾಸಧಾರಿಗಳೆಂದು ಅದು ಅದನ್ನು ಧಾರಣ ಮಾಡತಕ್ಕುದು. ಮತ್ತು ವಿನಿಯೋಗಿಸತಕ್ಕದ್ದು. ಅದರಲ್ಲಿನ ಹಣಗಳನ್ನು ಮಂಡಲಿಯು, ಕಾರ್ಮಿಕರು ಮತ್ತು ಅವರ ಅಶ್ರಿತರ ಕಲ್ಯಾಣವನ್ನು ಸಂವರ್ಧಿಸಲು ಕಾಲಕಾಲಕ್ಕೆ ರಾಜ್ಯ ಸರ್ಕಾರವು ನಿರ್ದಿಷ್ಟ ಪಡಿಸಬಹುದಾದಂಥ ಕ್ರಮಗಳನ್ನು ಕಾರ್ಯಗತಗೊಳಿಸುವುದರ ಬಗೆಗಿನ ಖರ್ಚನ್ನು ಭರಿಸಲು ಮಂಡಲಿಯು ಉಪಯೋಗಿಸತಕ್ಕದು.
  2. (1)ನೇ ಉಪ-ಪ್ರಕರಣದ ಸಾಮಾನ್ಯನ್ವಯಕ್ಕೆ ಬಾಧಕವಾಗದಂತೆ ನಿÀಧಿಯಲ್ಲಿನ ಹಣಗಳನ್ನು ಮಂಡಲಿಯು ಈ ಕೆಳಕಂಡವುಗಳ ಮೇಲಿನ ವೆಚ್ಚವನ್ನು ಭರಿಸಲು ಉಪಯೋಗಿಸಬಹುದು :-
   1. ವಾಚನಾಲಯಗಳು ಮತ್ತು ಗ್ರಂಥಾಲಯಗಳನ್ನು ಒಳಗೊಂಡು ಸಮುದಾಯ ಮತ್ತು ಸಮಾಜ ಶಿಕ್ಷಣ ಕೇಂದ್ರಗಳು ;
   2. ಸಮುದಾಯ ಅವಶ್ಯಕತೆಗಳು ;
   3. ಆಟಗಳು ಮತ್ತು ಕ್ರೀಡೆಗಳು ;
   4. ವಿಹಾರಗಳು, ಪ್ರವಾಸಗಳು ಮತ್ತು ವಿಶ್ರಾಂತಿ ಗೃಹಗಳು ;
   5. ಮನೋರಂಜನೆ ಮತ್ತು ಇತರ ಬಗೆಯ ವಿನೋದಗಳು ;
   6. ಮಹಿಳೆಯರು ಮತ್ತು ನಿರುದ್ಯೋಗ ವ್ಯಕ್ತಿಗಳಿಗಾಗಿ ಗೃಹ ಕೈಗಾರಿಕೆಗಳು ಮತ್ತು ಉಪ ಉದ್ಯೋಗಗಳು
   7. ಸಾಮಾಜಿಕ ಸ್ವರೂಪದ ಸಮುದಾಯ ಚಟುವಟಿಕೆಗಳು ;
   8. ಈ ಅಧಿನಿಯಮದ ಉದ್ದೇಶಗಳಿಗಾಗಿ, ನೇಮಕಗೊಂಡ ಸಿಬ್ಬಂದಿಯ ಸಂಬಳಗಳು ಮತ್ತು ಭತ್ಯಗಳನ್ನು ಒಳಗೊಂಡು ಅಧಿನಿಯಮವನ್ನು ನಿರ್ವಹಿಸುವ ಬಗ್ಗೆ ಖರ್ಚು ;
   9. ರಾಜ್ಯ ಸರ್ಕಾರದ ಅಭಿಪ್ರಾಯದಲ್ಲಿ ಕಾರ್ಮಿಕರ ಜೀವನದ ಮಟ್ಟವನ್ನು ಸುಧಾರಿಸುವ ಮತ್ತು ಅವರ ಸಾಮಾಜಿಕ ಸ್ಥಿಗತಿಗಳನ್ನು ಉತ್ತಮ ಪಡಿಸುವಂಥ ಇತರ ಉದ್ದೇಶಗಳು ;

   ಪರಂತು, ಅ ನಿಧಿಯನ್ನು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ ಯಾವ ಕ್ರಮವನ್ನು ಕಾರ್ಯಗತಗೊಳಿಸಲು ನಿಯೋಜಕನನ್ನು ಅಗತ್ಯಪಡಿಸಲಾಗಿದೆಯೋ ಆ ಯಾವುದೇ ಕ್ರಮಕ್ಕೆ ಹಣ ಒದಗಿಸಲು ಉಪಯೋಗಿಸತಕ್ಕುದಲ್ಲ ;

   ಮತ್ತು ಪರಂತು, ಮಜೂರಿಗಳ ಸಂದಾಯ ಅಧಿನಿಯಮ 1936 ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನಲ್ಲಿ ಏನೇ ಅಡಕವಾಗಿದ್ದಾಗ್ಯೂ, ಸಂದಾಯ ಮಾಡಿಲ್ಲದ ಸಂಚಯಗಳನ್ನು ಮತ್ತು ಜುಲ್ಮಾನೆಗಳನ್ನು ಮಂಡಲಿಗೆ ಸಂದಾಯ ಮಾಡತಕ್ಕದು ಮತ್ತು ಅದು ಈ ಅಧಿನಿಯಮದ ಮೇರೆಗೆ ಮಂಡಲಿಯು ಖರ್ಚು ಮಾಡತಕ್ಕುದು.

  3. ಮಂಡಲಿಯು ರಾಜ್ಯ ಸರ್ಕಾರದ ಅನುಮೋದನೆಯನ್ನು ಪಡೆದು ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರವು ಅನುಮೋದಿಸಿರುವ ಯಾವುದೇ ಚಟುವಟಿಯ ಸಹಾಯಾರ್ಥವಾಗಿ ಯಾವನೇ ನಿಯೋಜಕ ಯಾವುದೇ ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ಇತರ ನಿಕಾಯಕ್ಕೆ ನಿಧಿಯೊಳಗಿರದ ಅನುದಾನವನ್ನು ಕೊಡಬಹುದು.
  4. ಯಾವುದೇ ನಿರ್ದಿಷ್ಟ ವೆಚ್ಚ ನಿಧಿಗೆ ಖರ್ಚು ಹಾಕಬಹುದು ಅಥವಾ ಹಾಕಕೂಡದೋ ಹೇಗೆ ಎಂಬ ಬಗ್ಗೆ ಯಾವ್ಯದೇ ಪ್ರಶ್ನೆಯು ಉದ್ಬವಿಸಿದರೆ, ಆ ವಿಷಯವನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸತಕ್ಕದ್ದು ಮತ್ತು ರಾಜ್ಯ ಸರ್ಕಾರವು ಕೊಡುವ ತೀರ್ಮಾನ ಅಂತಿಮವಾಗಿರತಕ್ಕುದು.
  5. ಮಂಡಲಿಗೆ ಕಾರ್ಮಿಕ ಕಲ್ಯಾಣ ನಿಧಿಯನ್ನು ಕ್ರಮಬದ್ದವಾಗಿ ಮಂಡಲಿಗೆ ವರ್ಗಾಯಿಸಲಾಗಿದ್ದರೆ, ಯಾವುದೇ ಸಂಸ್ಥೆಯ ಆ ನಿಧಿಯಿಂದ ಹಣಕಾಸು ಒದಗಿಸಿದ ಯಾವುದೇ ಚಟುವಟಿಕೆಯನ್ನು ಮಂಡಲಿಯು ಮುಂದುವರಿಸಬಹುದು ಕಾನೂನು ಸಮ್ಮತವಾಗಿರತಕ್ಕದು.
 9. ಸಾಲ ಪಡೆಯಲು ಮಂಡಲಿಯ ಅಧಿಕಾರ

  ಮಂಡಲಿಯು, ಕಾಲಕಾಲಕ್ಕೆ ರಾಜ್ಯ ಸರ್ಕಾರದ ಪೂರ್ವ ಮಂಜೂರಾತಿಯನ್ನು ಪಡೆದು ಮತ್ತು ಆ ಅಧಿನಿಯಮದ ಉಪಬಂಧಗಳು ಮತ್ತು ಈ ಬಗ್ಗೆ ನಿರ್ದಿಷ್ಟಪಡಿಸಬಹುದಾದಂಥ ಷರತ್ತುಗಳಿಗೊಳಪಟ್ಟು, ಈ ಅಧಿನಿಯಮದ ಉದ್ದೇಶಗಳಿಗಾಗಿ, ಅಗತ್ಯವಾದ ಯಾವುದೇ ಮೊತ್ತವನ್ನು ಸಾಲವಾಗಿ ಪಡೆಯಬಹುದು.

 10. ನಿಧಿಯ ಹೊಡಿಕೆ

  ನಿಧಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಅಧಿನಿಯಮದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಮುಂಚಿತವಾಗಿ ವಿನಿಯೋಗಿಸಲಾಗದಿರುವಲ್ಲಿ ಮಂಡಲಿಯು ಅದನ್ನು ಭಾರತ ನ್ಯಾಸ ಅಧಿನಿಯಮ 1882 ರ 20ನೇ ಪ್ರಕರಣದ (ಕ) ಯಿಂದ (ಘ) ಮತ್ತು (ಚ) ವರೆಗಿನ ಖಂಡಗಳಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ಭದ್ರತೆಯಲ್ಲಿ ಹೊಡತಕ್ಕುದು.

 11. ಮಂಡಲಿಗೆ ರಾಜ್ಯ ಸರ್ಕಾರದಿಂದ ನಿರ್ದೇಶನ

  ರಾಜ್ಯ ಸರ್ಕಾರವು ನಿಧಿಯಿಂದ ಮಂಡಲಿಗೆ ಮಾಡಲಾಗುವ ವೆಚ್ಚಗಳ ಸಂಬಂಧದಲ್ಲಿ ಅಥವಾ ಅಧಿನಿಯಮದ ಇತರ ಉದ್ದೇಶಗಳನ್ನು ಈಡೇರಿಸುವಲ್ಲಿ ಅದರ ಅಭಿಪ್ರಾಯದಲ್ಲಿ ಅವಶ್ಯ ಅಥವಾ ವಿಹಿತವಾಗಿರುವಂಥ ನಿರ್ಧೇಶನಗಳನ್ನು ಕೊಡಬಹುದು, ಅಂಥ ನಿರ್ದೇಶನಗಳನ್ನು ಪಾಲಿಸುವುದು ಮಂಡಲಿಯ ಕರ್ತವ್ಯವಾಗಿರತಕ್ಕುದು.

 12. ಕಲ್ಯಾಣ ಆಯುಕ್ತರ ನೇಮಕಾತಿ ಮತ್ತು ಅಧಿಕಾರಗಳು
  1. ಮಂಡಲಿಯು ರಾಜ್ಯ ಸರ್ಕಾರದ ಪೂರ್ವಾನುಮೊದನೆಯನ್ನು ಪಡೆದು ವೆಲ್‍ಫೇರ್ ಕಮಿಷನರನನ್ನು ನೇಮಕ ಮಾಡತಕ್ಕುದು.
  2. ಕಲ್ಯಾಣ ಆಯುಕ್ತರು ಮಂಡಲಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರತಕ್ಕುದು.
  3. ಈ ಅಧಿನಿಯಮದ ಉಪಬಂಧಗಳನ್ನು ಮತ್ತು ಅದರ ಅಡಿಯಲ್ಲಿ ರಚಿಸಲಾದ ನಿಯಮಗಳನ್ನು ಕ್ರಮಬದ್ದವಾಗಿ ಈಡೇರಿಸುವುದನ್ನು ಸುನಿಶ್ಚಿತ ಪಡಿಸಿಕೊಳ್ಳುವುದು ಕಲ್ಯಾಣ ಆಯುಕ್ತರ ಕರ್ತವ್ಯವಾಗಿರತಕ್ಕುದು ಮತ್ತು ಈ ಉದ್ದೇಶಕ್ಕಾಗಿ ಅವನು ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರ ಅಡಿಯಲ್ಲಿ ರಚಿಸಲಾದ ನಿಯಮಗಳ ಮೇರೆಗೆ ಮಂಡಲಿಯು ತೆಗೆದುಕೊಂಡ ತೀರ್ಮಾನಗಳನ್ನು ಕಾರ್ಯಗತಗೊಳಿಸುವ ಯಾವುದೇ ಆದೇಶವನ್ನು ಒಳಗೊಂಡು ಅವನು ಸೂಕ್ತವೆಂದು ಯೋಚಿಸುಬಹುದಾದ ಅಧಿನಿಯಮದ ಉಪ ಬಂಧುಗಳು ಮತ್ತು ಅದರ ಮೇರೆಗೆ ರಚಿಸಲಾದ ನಿಯಮಗಳಿಗೆ ಅಸಂಗತವಾಗಿರದಂಥ ಆದೇಶಗಳನ್ನು ಹೊರಡಿಸಲು ಅಧಿಕಾರವನ್ನು ಹೊಂದಿರತಕ್ಕುದು.
 13. ಪರಿಶೀಲಕರ ನೇಮಕ
  1. ರಾಜ್ಯ ಸರ್ಕಾರವು, ನಿಧಿಗೆ ಸಂದಾಯ ಮಾಡಬೇಕಾದ ಮೊತ್ತಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಲು ಪರೀಶೀಲಕರನ್ನು ನೇಮಕ ಮಾಡಬಹುದು.
  2. ಯಾವನೇ, ಪರಿಶೀಲಕನು –
   1. ಅವನು ಸೂಕ್ತವೆಂದು ಯೋಚಿಸುಬಹುದಾದಂಥ ಸಹಾಯದೊಂದಿಗೆ ಯಾವುದೇ ಯುಕ್ತ ಕಾಲದಲ್ಲಿ ಯಾವುದೇ ಆವರಣವನ್ನು ಈ ಅಧಿನಿಯಮದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಪ್ರವೇಶಿಸಬಹುದು.
   2. ನಿಯಮಿಸಬಹುದಾದಂಥ ಇತರ ಯಾವುದೇ ಅಧಿಕಾರಗಳನ್ನು ಚಲಾಯಿಸಬಹುದು.
 14. ಮಂಡಲಿಯಿಂದ ಲಿಪಿಕ ಮತ್ತು ಇತರ ಸಿಬ್ಬಂದಿಯ ನೇಮಕಾತಿ

  ಮಂಡಲಿಯು ನಿಧಿಯಿಂದ ಹಣ ಒದಗಿಸಿದ ಚಟುವಟಿಕೆಗಳನ್ನು ನಡೆಸುವುದು ಮತ್ತು ಅವುಗಳ ಮೇಲ್ವಿಚಾರಣೆ ಮಾಡಲು ಅವಶ್ಯವಾದ ಲಿಪಿಕ ಮತ್ತು ಕಾರ್ಯನಿರ್ವಾಹಕ ಸಿಬ್ಬಂದಿಯನ್ನು ನೇಮಕ ಮಾಡಲು ಅಧಿಕಾರವನ್ನು ಹೊಂದಿರತಕ್ಕುದು.

  ಪರಂತು, ಹಾಗೆ ನೇಮಕಗೊಂಡ ಸಿಬ್ಬಂದಿಯ ವೆಚ್ಚಗಳು ಮತ್ತು ಇತರ ಆಡಳಿತಾತ್ಮಕ ವೆಚ್ಚಗಳು ನಿಧಿಯ ವಾರ್ಷಿಕ ಆದಾಯದ ನಿಯಮಿಸಲಾದ ಶೇಕಡಾವಾರನ್ನು ಮೀರತಕ್ಕುದಲ್ಲ.

 15. ಮಂಡಲಿಯ ಸಿಬ್ಬಂದಿಗೆ ಸೇರಿದ ಯಾವನೇ ವ್ಯಕ್ತಿಯನ್ನು ತೆಗೆದುಹಾಕಲು ರಾಜ್ಯ ಸರ್ಕಾರದ ಅಧಿಕಾರ.- ರಾಜ್ಯ ಸರ್ಕಾರವು, ಅದು ಯೋಗ್ಯವಲ್ಲವೆಂದು ಭಾವಿಸಬಹುದಾದ ಯಾವನೇ ವ್ಯಕ್ತಿಯನ್ನು ಮಂಡಲಿಯ ಸೇವೆಯಿಂದ ತೆಗೆದು ಹಾಕಲು ಅಧಿಕಾರವನ್ನು ಹೊಂದಿರತಕ್ಕುದು.
 16. ದಾಖಲೆಗಳು ಇತ್ಯಾದಿಗಳನ್ನು ತರಿಸಿಕೊಳ್ಳಲು ರಾಜ್ಯ ಸರ್ಕಾರ ಅಥವಾ ಅಧಿಕೃತಗೊಳಿಸಿದ ಅಧಿಕಾರಿಯ ಅಧಿಕಾರ:- ರಾಜ್ಯ ಸರ್ಕಾರ ಅಥವಾ ರಾಜ್ಯ ಸರ್ಕಾರವು ಅಧಿಕೃತಗೊಳಿಸಿದ ಯಾವನೇ ಅಧಿಕಾರಿಯು, ಮಂಡಲಿಯ ದಾಖಲೆಗಳನ್ನು ತರಿಸಿಕೊಳ್ಳಬಹುದು, ಅವುಗಳನ್ನು ಪರಿಶೀಲಿನೆ ಮಾಡಬಹುದು. ಮತ್ತು ಮಂಡಲಿಯ ಕೆಲಸದ ಮೇಲ್ವಿಚಾರಣೆಯನ್ನು ಮಾಡಬಹುದು.
 17. ನಿಧಿಗೆ ಸಂದಾಯ ಮಾಡಬೇಕಾದ ಮೊತ್ತಗಳ ವಸೂಲಿಯ ವಿಧಾನ ಇತ್ಯಾದಿ.

  ಈ ಅಧಿನಿಯಮದ ಮೇರೆಗೆ ನಿಧಿಗೆ ಸಂದಾಯ ಮಾಡಬೇಕಾದ ಯಾವುದೇ ಮೊತ್ತವನ್ನು ವಸೂಲಿಯ ಯಾವುದೇ ಇತರ ರೀತಿಗೆ ಬಾಧಕವಾಗದಂತೆ, ಮಂಡಲಿಯ ಪರವಾಗಿ ಭೂ ಕಂದಾಯದ ಬಾಕಿಗಳಂತೆ ವಸೂಲು ಮಾಡತಕ್ಕುದು.

  1. ಪರಿಶೀಲಕನು ಅವನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅಡ್ಡಿಯನ್ನುಂಟು ಮಾಡಿದ್ದಕ್ಕಾಗಿ ಅಥವಾ ದಸ್ಥಾವೇಜುಗಳನ್ನು ಇತ್ಯಾದಿಗಳನ್ನು ಹಾಜರುಪಡಿಸಲು ತಪ್ಪುವುದಕ್ಕಾಗಿ ದಂಡನೆ.-

   17-A. ಈ ಅಧಿನಿಯಮದ ಮೇರೆಗಿನ ಅವನ ಅಧಿಕಾರಿಗಳನ್ನು ಚಲಾಯಿಸುವಲ್ಲಿ ಅಥವಾ ಅವನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಪರಿಶೀಲಕನಿಗೆ ಉದ್ದೇಶಪೂರ್ವಕವಾಗಿ ಅಡ್ಡಿಯನ್ನುಂಟು ಮಾಡುವ ಅಥವಾ ಈ ಅಧಿನಿಯಿಮದ ಉಪಬಂಧಗಳು ಅಥವಾ ಅದರ ಅಡಿಯಲ್ಲಿ ರಚಿಸಿದ ನಿಯಮಗಳ ಅನುಸರಣೆಯಲ್ಲಿ ಇಟ್ಟುಕೊಂಡು ಬಂದಿರುವ ಯಾವುದೇ ರಿಜಿಸ್ಟರುಗಳ ದಾಖಲೆಗಳನ್ನು ಅಥವಾ ಇತರ ದಸ್ತಾವೇಜುಗಳನ್ನು ಪರಿಶೀಲಕನು ತಗಾದೆ ಮಾಡಿದಾಗ ಪರಿಶೀಲನೆಗಾಗಿ ಅವುಗಳನ್ನು ಹಾಜರುಪಡಿಸಲು ತಪ್ಪುವ ಅಥವಾ ಯಾವುದೇ ಅಂಥ ದಸ್ತಾವೇಜುಗಳ ನಿಜ ಪ್ರತಿಗಳನ್ನು ತಗಾದೆ ಮಾಡಿದಾಗ ಅವನಿಗೆ ಒದಗಿಸಲು ತಪ್ಪುವ ಯಾವನೇ ವ್ಯಕ್ತಿಯು, ಅಪರಾಧವು ನಿರ್ಣಯವಾದ ಮೇಲೆ, ಮೊದಲ ಅಪರಾಧಕ್ಕಾಗಿ ಮೂರು ತಿಂಗಳಿಗಳಿಗೆ ವಿಸ್ತರಿಸಬಹುದಾದಂಥ ಅವಧಿಯ ಕಾರಾವಾಸದಿಂದ, ಅಥವಾ ಐದು ನೂರು ರೂಪಾಯಿಗಳವರೆಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ; ಮತ್ತು ಎರಡನೇ ಅಥವಾ ಆ ತರುವಾಯದ ಅಪರಾಧಗಳಿಗೆ ಆರು ತಿಂಗಳುಗಳಿಗೆ ವಿಸ್ತರಿಸಬಹುದಾದಂಥ ಅವಧಿಯ ಕಾರವಾಸದಿಂದ ಅಥವಾ ಒಂದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕುದು.

   ಪರಂತು, ನ್ಯಾಯಾಲಯದ ತೀರ್ಪಿನಲ್ಲಿ ತದ್ವಿರುದ್ದುವಾಗಿ ನಮೂದು ಮಾಡಬೇಕಾದ ವಿಶೇಷ ಮತ್ತು ಸಾಕಷ್ಟು ಕಾರಣಗಳಿಲ್ಲದಿರುವಲ್ಲಿ ಅಪರಾಧಿಯನ್ನು ಜುಲ್ಮಾನೆಯಿಂದ ಮಾತ್ರವೇ ಶಿಕ್ಷಿಸುವ ಯಾವುದೇ ಪ್ರಕರಣದಲ್ಲಿ ಜುಲ್ಮಾನೆಯ ಮೊಬಲಗು ಐವತ್ತು ರೂಪಾಯಿಗಳಿಗಿಂತ ಕಡಿಮೆಯಾಗಿರತಕ್ಕುದು.

  2. 17-B. ಅಧಿನಿಯಮದ ಯಾವುದೇ ಉಪಬಂಧಗಳ ಉಲ್ಲಂಘನೆಗಾಗಿ ದಂಡನೆ. –

   ಅಧಿನಿಯಮದ ಯಾವುದೇ ಉಪಬಂದವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಯಾವನೇ ವ್ಯಕ್ತಿಯ ಅಪರಾಧವು ನಿರ್ಣಯವಾದ ಮೇಲೆ ಮೊದಲ ಅಪರಾಧಕ್ಕಾಗಿ ಐದು ನೂರು ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಅಥವಾ ಮೂರು ತಿಂಗಳುಗಳಿಗೆ ವಿಸ್ತಿಸಬಹುದಾದಂಥ ಅವಧಿಯ ಕಾರಾವಾಸದಿಂದ ಮತ್ತು ಎರಡನೆಯ ಮತ್ತು ಆ ತರುವಾಯದ ಅಪರಾಧಗಳಿಗಾಗಿ ಒಂದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ಅಥವಾ ಒಂದು ವರ್ಷದವರೆಗೆ ವಿಸ್ತರಿಸಬಹುದಾದಂಥ ಅವಧಿಯ ಕಾರಾವಾಸದಿಂದ ಅಥವಾ ಅವೆರಡರಿಂದಲೂ ದಂಡಿತನಾಗತಕ್ಕುದು.

  3. 17-C. ಅಪರಾದಿಗಳ ಸಂಜ್ಞೇಯತೆ.- ಯಾವುದೇ ನ್ಯಾಯಾಲಯವು, ವೆಲ್‍ಫೇರ್ ಕವಿಷನರನ್ ಪೂರ್ವ ಮಂಜೂರಾತಿಯನ್ನು ಪಡೆದು ಪರಶೀಲಕನು ದೂರನ್ನು ದಾಖಲು ಮಾಡಿದ ಹೊರತು ಯಾವ ನ್ಯಾಯಾಲಯವು ಈ ಅಧಿನಿಯಮದ ಮೇರೆಗಿನ ಅಪರಾಧದ ಬಗ್ಗೆ ಸಂಜ್ಞೇಯತೆಯನ್ನು ತೆಗೆದುಕೊಳ್ಳತಕ್ಕುದಲ್ಲ.
 18. ಮಂಡಲಿಯನ್ನು ರದ್ದುಗೊಳಿಸುವುದು.-
  1. ಈ ಅಧಿನಿಯಮದ ಮೂಲಕ ಅದರ ಮೇರೆಗೆ ಮಂಡಲಿಗೆ ವಿಧಿಸಿದ ಯಾವುದೇ ಕರ್ತವ್ಯಗಳನ್ನು ನೆರವೇರಿಸುವಲ್ಲಿ ಅದು ತಪ್ಪಿದೆಯೆಂದು ಅಥವಾ ಅದರ ಅಧಿಕಾರವನ್ಮ್ನ ದುರುಪಯೋಗ ಪಡಿಸಿಕೊಂಡಿದೆಯೆಂದು ರಾಜ್ಯ ಸರ್ಕಾರಕ್ಕೆ ಮನದಟ್ಟಾದರೆ, ರಾಜ್ಯ ಸರ್ಕಾರವು ಸರ್ಕಾರಿ ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಮಂಡಲಿಯನ್ನು ರದ್ದುಗೊಳಿಸಬಹುದು ಮತ್ತು ನಿಯಮಿಸಿದ ರೀತಿಯಲ್ಲಿ ಅದನ್ನು ಪುನ : ರಚಿಸಬಹುದು.

   ಪರಂತು ಈ ಉಪ-ಪ್ರಕರಣದ ಮೇರೆಗೆ ಅಧಿಸೂಚನೆಯನ್ನು ಹೊರಡಿಸುವುದಕ್ಕೆ ಮುಂಚೆ ರಾಜ್ಯ ಮಂಡಲಿಗೆ ಅದನ್ನು ಏಕೆ ರದ್ದುಗೊಳಿಸಬಾರದೆಂಬುದಕ್ಕೆ ಕಾರಣ ತೋರಿಸಲು, ಸೂಕ್ತ ಅವಕಾಶವನ್ನು ಕೊಡತಕ್ಕುದು. ಮಂಡಲಿಯ ವಿವರಣೆಗಳು ಮತ್ತು ಆಕ್ಷೇಪಣೆಗಳು ಯಾವುದಾದರೂ ಇದ್ದರೆ ಅವುಗಳನ್ನು ಪರ್ಯಾಲೋಚಿಸತಕ್ಕುದು.

  2. ಮಂಡಲಿಯನ್ನು ರದ್ದುಗೊಳಿಸಿದ ತರುವಾಯ ಮತ್ತು ಅದನ್ನು ಪುನ : ರಚಿಸುವವರೆಗೆ, ಈ ಅಧಿನಿಯಮದ ಮೇರೆಗಿನ ಮಂಡಲಿಯ ಅಧಿಕಾರಗಳು, ಕರ್ತವ್ಯಗಳು ಮತ್ತು ಪ್ರಕಾರ್ಯಗಳನ್ನು ರಾಜ್ಯ ಸರ್ಕಾರವು ಈ ಉದ್ದೇಶಕ್ಕಾಗಿ ನೇಮಕ ಮಾಡಬಹುದಾದಂಥ ಅಧಿಕಾರಿಯು ಚಲಾಯಿಸತಕ್ಕುದು ಅಥವಾ ನೆರವೇರಿಸತಕ್ಕುದು.
 19. ನಿಯಮಗಳು.-
  1. ರಾಜ್ಯ ಸರ್ಕಾರವು, ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಮತ್ತು ಅದರ ಪೂರ್ವ ಪ್ರಕಟಣೆಯ ಷರತ್ತಿಗೊಳಪಟ್ಟು ಈ ಅಧಿನಿಯಮದ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ನಿಯಮಗಳನ್ನು ರಚಿಸಬಹುದು.
  2. ವಿಶೇಷವಾಗಿ ಮತ್ತು ಹಿಂದೆ ಹೇಳಿದ ಅಧಿಕಾರದ ಸಾಮಾನ್ಯನ್ವಯಕ್ಕೆ ಬಾಧಕವಾಗದಂತೆ ಈ ಕೆಳಕಂಡ ಎಲ್ಲ ಅಥವಾ ಯಾವುದೇ ವಿಷಯಗಳಿಗಾಗಿ ಅಂಥ ನಿಯಮಗಳನ್ನು ರಚಿಸಬಹುದು. ಎಂದರೆ:-
   1. 3ನೇ ಪ್ರಕರಣದ (3)ನೇ ಉಪ-ಪ್ರಕರಣದಲ್ಲಿ ನಿರ್ದಿಷ್ಟಪಡಿಸಲಾದ ಮೊತ್ತಗಳ ಸಂಗ್ರಹಣೆಗಾಗಿನ ಏಜನ್ಸಿ ಮತ್ತು ಅವುಗಳ ಸಂಗ್ರಹಣೆಯ ರೀತಿ ಮತ್ತು ಯಾವ ಅವಧಿಯೊಳಗೆ ಅದನ್ನು ನಿಧಿಗೆ ಜಮೆ ಮಾಡಬೇಕೋ ಆ ಅವಧಿ;
   2. 3ನೇ ಪ್ರಕರಣದ (3) ನೇ ಉಪ-ಪ್ರಕರಣದ ಮೇರೆಗೆ ನಿಧಿಯ ಲೆಕ್ಕಪತ್ರಗಳನ್ನು ಇಟ್ಟುಕೊಂಡು ಬರತಕ್ಕ ಮತ್ತು ಅದರ ಲೆಕ್ಕ ಪರಿಶೋದನೆಯನ್ನು ಮಾಡತಕ್ಕಂಥ ರೀತಿ ;
   3. 8ನೇ ಪ್ರಕರಣದ ಮೇರೆಗೆ ನಿಧಿಯಿಂದ ಅನುದಾನಗಳನ್ನು ಮಾಡುವುದಕ್ಕಾಗಿನ ಪ್ರಕ್ರಿಯೆ ;
   4. ಆ ನಿಧಿಯನ್ನು ನಿರ್ವಹಿಸುವಲ್ಲಿ ವಹಿಸಿದ ವೆಚ್ಚವನ್ನು ಭರಿಸುವುದಕ್ಕಾಗಿನ ಪ್ರಕ್ರಿಯೆ ;
   5. ಮಂಡಲಿಯಲ್ಲಿರಬೇಕಾದ ನಿಯೋಜಕರ ಮತ್ತು ನಿಯೋಜಿತರ, ಪ್ರತಿ ನಿಧಿಗಳ, ಸ್ವತಂತ್ರ ಸದಸ್ಯರ ಮತ್ತು ಮಹಿಳಾ ಪ್ರತಿನಿಧಿಗಳ ಸಂಖ್ಯೆ ಮತ್ತು ಅವರಿಗೆ 4ನೇ ಪ್ರಕರಣದ ಮೇರೆಗೆ ಸಂದಾಯ ಮಾಡಬೇಕಾದ ಭತ್ಯೆಗಳು, ಯಾವುದಾದರೂ ಇದ್ದರೆ ಅವು ;
   6. ಮಂಡಲಿಯು ಅದರ ವ್ಯವಹಾಶರಗಳನ್ನು ನಡೆಸಸತಕ್ಕಂಥ ರೀತಿ ;
   7. ಪರಿಶೀಲಕರ ಕರ್ತವ್ಯಗಳು ಮತ್ತು ಅಧಿಕಾರಗಳು ಮತ್ತು ಈ ಅಧಿನಿಯಮದ ಮೇರೆಗೆ ನೇಮಕಗೊಂಡ ಕಲ್ಯಾಣ ಆಯುಕ್ತರು ಮತ್ತು ಪರಿಶೀಲಕರು ಮತ್ತು ಇತರ ಸಿಬ್ಬಂದಿಯ ಸೇವಾ ಷರತ್ತುಗಳು ;
   8. ಮಂಡಲಿಯ ಅಧಿಕಾರಗಳನ್ಮ್ನ ಮತ್ತು ಪ್ರಕಾರ್ಯಗಳನ್ನು ಕಲ್ಯಾಣ ಆಯುಕ್ತರವರಿಗೆ ಪ್ರತ್ಯಾಯೋಜಿಸುವುದು ಮತ್ತು ಯಾವ ಷರತ್ತುಗಳು ಮತ್ತು ಪರಿಮಿತಿಗಳಿಗೊಳಪಟ್ಟು ಆ ಅಧಿಕಾರಗಳನ್ನು ಚಲಾಯಿಸಬಹುದೋ, ಅಥವಾ ಪ್ರಕಾರ್ಯಗಳನ್ನು ನೆರವೇರಿಸಹುದೋ ಆ ಷರತ್ತುಗಳು ಮತ್ತು ಪರಿಮಿಗಳು ; ಪರಿಮಿತಿಗಳು.
   9. ಸಿಬ್ಬಂದಿ ಮತ್ತು ಇತರ ಆಡಳಿತಾತ್ಮಕ ಕ್ರಮಗಳ ಬಗ್ಗೆ ಮಂಡಲಿಯು ನಿಧಿಯ ವಾರ್ಷಿಕ ವೆಚ್ಚ ಮಾಡಲಾಗದಂಥ ಆದಾಯದ ಯಾವ ಶೇಕಡವಾರನ್ನು ಮೀರಿ ಖರ್ಚು ಮಾಡಬಾರದೂ ಆ ಶೇಕಡವಾರು ;
   10. ಈ ಅಧಿನಿಯಮದ ಮೇರೆಗೆ ಇಟ್ಟುಕೊಂಡು ಬರಬೇಕಾದ ರಿಜಿಸ್ಟರುಗಳು ಮತ್ತು ದಾಖಲೆಗಳು
   11. ನಿಧಿಯ ಜಮೆ ಮತ್ತು ವೆಚ್ಚದ ವಿವರಪತ್ರ ಮತ್ತು ಲೆಕ್ಕಪತ್ರಗಳ ವಿವರ ಪತ್ರದೊಂದಿಗೆ ನಿಧಿಯಿಂದ ಹಣ ಒದಗಿಸಿದ ಚಟುವಟಿಕೆಯ ಬಗ್ಗೆ ವರದಿ ಪ್ರಕರಣೆ ;
   12. ಮಂಡಲಿಯು ಯಾವ ಷರತ್ತಿಗೊಳಪಟ್ಟು ಸ್ಥಿರ ಮತ್ತು ಚರ ಸ್ವತ್ತನ್ನು ವಿಲೇ ಮಾಡಬಹುದೋ ಅಥವಾ ಕರಾರನ್ನು ಮಾಡಿಕೊಳ್ಳಬಹುದೋ ಆ ಷರತ್ತು ;
   13. ಈ ಅಧಿನಿಯಮದ ಮೇರೆಗೆ ನಿಯಮಿಸಬಹುದಾದಂಥ ಯಾವುದೇ ಇತರ ವಿಷಯ ;
  3. ಈ ಅಧಿನಿಯಮ ಮೇರೆಗಿನ ನಿಯಮವನ್ನು ಪೂರ್ವಾನ್ವಯವಾಗಿ ಪರಿಣಾಮಕಾರಿ ಯಾಗಿರುವಂತೆ ಮಾಡಬಹುದು ಮತ್ತು ಅಂಥ ನಿಯಮವನ್ನು ರಚಿಸುದಾಗ, ಆ ನಿಯಮವನ್ನು ರಚಿಸಿದ್ದಕ್ಕಾಗಿನ ಕಾರಣಗಳನ್ನು ರಾಜ್ಯ ವಿಧಾನ ಮಂಡಲದ ಎರಡೂ ಸದನಗಳ ಮುಂದೆ ಇಟ್ಟು ವಿವರ ಪತ್ರದಲ್ಲಿ ನಿರ್ದಿಷ್ಟಪಡಿಸತಕ್ಕುದು. 23ನೇ ಪ್ರಕರಣದ ಮೇರೆಗೆ ಮಾಡಿದ ಯಾವುದೇ ಮಾರ್ಪಾಟಿಗೊಳಪಟ್ಟು, ಈ ಅಧಿನಿಯಮದ ಮೇರೆಗೆ ರಚಿಸಿದ ಪ್ರತಿಯೊಂದು ನಿಯಮವು ಈ ಅಧಿನಿಯಮದಲ್ಲಿ ಅಧಿನಿಯಮಿತವಾಗದ್ದಿದ್ದರೆ ಹೇಗೂ ಹಾಗೆ ಪರಿಣಾಮಕಾರಿಯಾಗಿರತಕ್ಕುದು.
 20. ಮಂಡಲಿಯ ಸದಸ್ಯರು, ಕಲ್ಯಾಣ ಆಯುಕ್ತರು, ಪರಿಶೀಲಕರು ಮತ್ತು ಮಂಡಲಿಯ ಎಲ್ಲ ಅಧಿಕಾರಿಗಳು ಹಾಗೂ ನೌಕರರು ಲೋಕ ನೌಕರರಾಗಿರತಕ್ಕುದು.- ಮಂಡಲಿಯ ಸದಸ್ಯರು, ಕಲ್ಯಾಣ ಆಯುಕ್ತರು, ಪರಿಶೀಲಕರು ಮತ್ತು ಮಂಡಲಿಯ ಎಲ್ಲ ಅಧಿಕಾರಿಗಳು ಮತ್ತು ನೌಕರರನ್ನು ಭಾರತ ದಂಡ ಸಂಹಿತೆಯ 21ನೇ ಪ್ರಕರಣದ ಅರ್ಥ ವ್ಯಾಪ್ತಿಯಲ್ಲಿ ಲೋಕ ನೌಕರರೆಂದು ಭಾವಿಸತಕ್ಕದು.
 21. ಸದ್ಭಾವನೆಯಿಂದ ಕಾರ್ಯ ನಿರ್ವಹಿಸುವ ವ್ಯಕ್ತಿಗಳಿಗೆ ಸಂರಕ್ಷಣೆ.- ಯಾವುದೇ ದಾವೆಯನ್ನು, ಪ್ರಾಸಿಕ್ಯೂಸನನ್ನು ಅಥವಾ ಇತರ ಕಾನೂನು ವ್ಯವಹರಣೆಯನ್ನು ಈ ಅಧಿನಿಯಮದ ಮೇರೆಗೆ, ಸದ್ಭಾವನೆಯಿಂದ ಮಾಡಿದ ಅಥವಾ ಮಾಡಲು ಉದ್ದೇಶಿಸಿದಂಥ ಯಾವುದೇ ಕಾರ್ಯಕ್ಕಾಗಿ ಮಂಡಲಿ ಅಥವಾ ಅಂಥ ಯಾವನೇ ವ್ಯಕ್ತಿಯ ವಿರುದ್ದ ಹೂಡತಕ್ಕುದಲ್ಲ.
 22. ವಿನಾಯಿತಿ.- ರಾಜ್ಯ ಸರ್ಕಾರವು, ಸರ್ಕಾರಿ ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಈ ಅಧಿಸೂಚನೆಯಲ್ಲಿ ನಿರ್ಧಿಷ್ಟಪಡಿಸಬಹುದಾದಂಥ ಷರತ್ತುಗಳಿಗೊಳಪಟ್ಟು ಈ ಅಧಿನಿಯಮದ ಎಲ್ಲ ಅಥವಾ ಯಾವುದೇ ಉಪಬಂಧದಿಂದ ಕಾರ್ಯ ಸಂಸ್ಥೆಗಳ ಯಾವುದೇ ವರ್ಗಕ್ಕೆ ವಿನಾಯತಿ ಕೊಡಬಹುದು.
 23. ನಿಯಮಗಳು ಮತ್ತು ಅಧಿಸೂಚನೆಗಳನ್ನು ರಾಜ್ಯ ವಿಧಾನ ಮಂಡಲದ ಮುಂದೆ ಇಡತಕ್ಕುದು.- ಈ ಅಧಿನಿಯಮದ ಮೇರೆಗೆ ರಚಿಸಿದ ಪ್ರತಿಯೊಂದು ನಿಯಮ ಮತ್ತು 22ನೇ ಪ್ರಕರಣದ ಮೇರೆಗೆ ಹೊರಡಿಸಿದ ಪ್ರತಿಯೊಂದು ಅಧಿಸೂಚನೆಯನ್ನು ಅದನ್ನು ರಚಿಸಿದ ಅಥವಾ ಹೊರಡಿಸಿದ ತರುವಾಯ ಆದಷ್ಟು ಬೇಗನೆ, ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಅದು ಅಧಿವೇಶನದಲ್ಲಿರುವಾಗ ಒಂದು ಅಧಿವೇಶನ ಅಥವಾ ಒಂದಾದ ಮೇಲೋಂದರಂತೆ ಬರುವ ಎರಡು ಅಥವಾ ಹೆಚ್ಚಿನ ಅಧಿವೇಶನಗಳಲ್ಲಿ ಅಡಕವಾಗಬಹುದಾದಂಥ ಒಟ್ಟು ಮೂವತ್ತು ದಿವಸಗಳ ಅವಧಿಯವರೆಗೆ ಇಡತಕ್ಕುದು, ಮತ್ತು ಅದನ್ನು ಹಾಗೆ ಇಡಲಾದಂಥ ಅಧಿವೇಶನ ಅಥವಾ ಅದಕ್ಕೆ ನಿಕಟೋತ್ತರದ ಅಧಿವೇಶನವು ಮುಕ್ತಾಯವಾಗುವುದಕ್ಕೆ ಮುಂಚೆ, ಈ ನಿಯಮದಲ್ಲಿ ಅಥವಾ ಅಧಿಸೂಚನೆಯಲ್ಲಿ ಯಾವುದೇ ಮಾರ್ಪಾಟನ್ನು ಮಾಡಬೇಕೆಂದು ಎರಡು ಸದನಗಳು ಒಪ್ಪಿದರೆ, ಅಥವಾ ಆ ನಿಯಮವನ್ನು ರಚಿಸಕೊಡದೆಂದು ಅಥವಾ ಆ ಅಧಿಸೂಚನೆಯನ್ನು ಹೊರಡಿಸಬಾರದೆಂದು ಎರಡೂ ಸದನಗಳು ಒಪ್ಪಿದರೆ, ಅ ತರುವಾಯ ಸಂಧರ್ಬಾನುಸಾರರ ಆ ನಿಯಮವು ಅಥವಾ ಅಧಿಸೂಚನೆಯು, ಹಾಗೆ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕುದ್ದು, ಪರಿಣಾಮಕಾರಿಯಾಗತಕ್ಕುದಲ್ಲ ಅದಾಗ್ಯೂ ಯಾವುದೇ ಅಂಥ ಮಾರ್ಪಾಟು ಅಥವಾ ರದ್ದಿಯಾತಿಯು ಅಂಥ ನಿಯಮ ಅಥವಾ ಅಧಿಸೂಚನೆಯ ಮೇರೆಗೆ ಹಿಂದೆ ಮಾಡಿದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾದೇಯನ್ನುಂಟು ಮಾಡತಕಕುದಲ್ಲ.
 24. ಸರ್ಕಾರಿ ಕಾರ್ಮಿಕ ಕಲ್ಯಾಣ ಕೇಂದ್ರಗಳನ್ನು ಮಂಡಲಿಗೆ ವರ್ಗಾಯಿಸಬಹುದು
  1. ರಾಜ್ಯ ಸರ್ಕಾರದ ಕಾರ್ಮಿಕ ಕಲ್ಯಾಣ ಕೇಂದ್ರಗಳ ನಿಯಂತ್ರಣ ಮತ್ತು ವ್ಯವಸ್ಥಾಪನೆಯ ರಾಜ್ಯ ಸರ್ಕಾರವು ಸರ್ಕಾರಿ ರಾಜಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಿಂದ ಮಂಡಲಿಗೆ ವರ್ಗಾಯಿತವಾಗತಕ್ಕುದು ಮತ್ತು ಆ ತರುವಾಯ, ಅಂಥ ಕೇಂದ್ರಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದ ಎಲ್ಲ ಸ್ವತ್ತುಗಳು, ಮತ್ತು ಆಸ್ತಿಗಳು ಮತ್ತು ಹೊಣೆಗಾರಿಕೆಗಳು ಮತ್ತು ಬಾಧ್ಯತೆಗಳು ಮಂಡಲಿಗೆ ವರ್ಗಾಯಿತವಾಗತಕ್ಕುದು, ಮತ್ತು ಅದರಲ್ಲಿ ನಿಹಿತವಾಗತಕ್ಕುದು ಅಥವಾ ಅದಕ್ಕೆ ಪ್ರಾಪ್ತವಾಗತಕ್ಕುದು.
  2. 1)ನೇ ಉಪ-ಪ್ರಕರಣದ ಮೇರೆಗೆ ಗೊತ್ತುಪಡಿಸಿದ ದಿನಾಂಕಕ್ಕೆ ನಿಕಟ ಪೂರ್ವದಲ್ಲಿ ಸದರಿ ಕೇಂದ್ರದಲ್ಲಿ ಅಥವಾ ಅದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಪೂರ್ಣವಾಗಿ ಅಥವಾ ಮುಖ್ಯವಾಗಿ ನಿಯೋಜಿತರಾಗಿರುವ ರಾಜ್ಯ ಸರ್ಕಾರದ ಪ್ರತಿಯೊಬ್ಬ ನಿಯೋಜಿತನು, ಸದರಿ ದಿನಾಂಕದಿಂದ ಮಂಡಲಿಯ ನಿಯೋಜಿತನಗತಕ್ಕುದು ಮತ್ತು ಸದರಿ ಕೇಂದ್ರದ ವರ್ಗಾವಣೆಯನ್ನು ಮಾಡಿಲ್ಲದಿದ್ದರೆ ಅದನ್ನು ಧಾರಣ ಮಾಡಿರುತ್ತಿದ್ದಂಥವೇ ಅವಧಿಗೆ ಅದೇ ಪರಿಶ್ರಮಧನ ಮತ್ತು ಅವೇ ನಿಬಂಧನೆಗಳು ಮತ್ತು ಷರತ್ತುಗಳ ಮೇಲೆ ಮತ್ತು ಪಿಂಚಣಿ ಮತ್ತು ಉಪದಾನ ಹಾಗೂ ಇತರ ವಿಷಯಗಳ ಬಗ್ಗೆ ಅವೇ ಹಕ್ಕುಗಳು ಮತ್ತು ವಿಶೇಷಾಧಿಕಾರಿಗಳನ್ನು ಮಂಡಲಿಯ ಅಧಿನದಲ್ಲಿ ಪದಧಾರಣ ಮಾಡತಕ್ಕುದು ಮತ್ತು ಮಂಡಲಿಯ ಅಧೀನದಲ್ಲಿ ಅವನ ನಿಯೋಜನೆಯನ್ನು ಕೊನೆಗೊಳಿಸಿದ ಹೊರತು ಮತ್ತು ಅಲ್ಲಿಯವರೆಗೆ ಹಾಗೆ ಮಾಡುವುದು ಅಥವಾ ಅವನ ಪರಿಶ್ರಮಧನ ಸೇವಾ ನಿಬಂಧನೆಗಳು ಮತ್ತು ಷರತ್ತುಗಳನ್ನು ಮಂಡಲಿಯು ಕ್ರಮಬದ್ದವಾಗಿ ಬದಲಾಯಿಸುವವರೆಗೆ ಹಾಗೆ ಮಾಡುವುದು ಮುಂದುವರಿಯತಕ್ಕುದು.

  ಪರಂತು, ಯಾವನೇ ಅಂಥ ನಿಯೋಜಿತನ ಪರಿಶ್ರಮಧನ, ಸೇವಾ ನಿಬಂಧನೆಗಳು ಮತ್ತು ಷರತ್ತುಗಳನ್ನು, ರಾಜ್ಯ ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಅಲ್ಲದೆ ಅವನಿಗೆ ಅನಾನುಕೂಲವಾಗುವಂತೆ ವ್ಯತ್ಯಾಸಗೊಳಿಸತಕ್ಕುದಲ್ಲ.

 25. ಕೇಂದ್ರಾಧಿನಿಯಮ 1926ರ 4ರ 8ನೇ ಪ್ರಕರಣದ ತಿದ್ದುಪಡಿ.- ಮಜೂರಿಗಳ ಸಂದಾಯ ಅಧಿನಿಯಮ, 1936ರ, ಕೇಂದ್ರಾಧಿನಿಯಮ 1936ರ (4ರ 8ನೇ ಪ್ರಕರಣದಲ್ಲಿ, (8)ನೇ ಉಪ-ಪ್ರಕರಣದಲ್ಲಿ, ವಿವರಣೆಗೆ ಮುಂಜೆ ಈ ಕೆಳಕಂಡದ್ದನ್ನು ಸೇರಿಸತಕ್ಕುದು, ಎಂದರೆ-

  ಆದರೆ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1965 ಇದು ಅನ್ವಯವಾಗುವಂಥ ಯಾವುದೇ ಕಾರ್ಖಾನೆ ಅಥವಾ ಕಾರ್ಯ ಸಂಸ್ಥೆಯ ಸಂದರ್ಭದಲ್ಲಿ ಎಲ್ಲ ಅಂಥ ವಸೂಲಿಗಳನ್ನು ಸದರಿ ಅಧಿನಿಯಮದ ಮೇರೆಗೆ ರಚಿಸಿದ ನಿಧಿಗೆ ಸಂದಾಯ ಮಾಡತಕ್ಕುದು.

 26. ನಿರಸನ ಮತ್ತು ಉಳಿಸುವಿಕೆಗಳು
  1. ಬೆಳಗಾವಿ ಪ್ರದೇಶದಲ್ಲಿ ಈ ಅಧಿನಿಯಮವು ಜಾರಿಗೆ ಬರುವ ದಿನಾಂಕದಿಂದ :-
   1. ಬೆಳಗಾವಿ ಪ್ರದೇಶದಲ್ಲಿ ಜಾರಿಯಲ್ಲಿರುವ ಮುಂಬಯಿ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1953 (ಮುಂಬಯಿ ಅಧಿನಿಯಮ 1953ರ ಸಂಖ್ಯೆ 40) ಇದು ನಿರಸನಗೊಳ್ಳತಕ್ಕುದು ;
   2. ಅಂತರರಾಜ್ಯ ನಿಗಮಗಳ ಅಧಿನಿಯಮ, 1957ರ (ಕೇಂದ್ರಾಧಿನಿಯಮ 1957 ರ ಸಂಖ್ಯೆ 38) ಅಡಿಯಲ್ಲಿ ಕೇಂದ್ರ ಸರ್ಕಾರವು ಮಾಡಿದ ಮುಂಬಯಿ ಕಾರ್ಮಿಕ ಕಲ್ಯಾಣ ಮಂಡಲಿ (ಪುನರಚನೆ) ಆದೇಶ, 1959- ಇದರಲ್ಲಿ ಪರಿಭಾಷಿಸಿದಂತೆ, ಹೊಸ ಮಂಡಲಿಯಲ್ಲಿ ನಿಹಿತವಾಗಿರುವ ಎಲ್ಲ ಸ್ವತ್ತುಗಳು, ನಿಧಿ ಮತ್ತು ಅದು ವಸೂಲ್ಮಾಡಬೇಕಾದ ಬಾಕಿಗಳು ಈ ಅಧಿನಿಯಮದ ಮೇರೆಗೆ ರಚಿಸಲಾದ ಮಂಡಲಿಯಲ್ಲಿ ನಿಹಿತವಾಗತಕ್ಕುದು ಮತ್ತು ಅದರಿಂದ ವಸೂಲೀಯವಾಗತಕ್ಕುದು.
   3. ಸದರಿ ಹೊಸ ಮಂಡಲಿಯ ವಿರುದ್ದ ಜಾರಿಗೊಳಿಸಬಹುದಾಗಿದ್ದಂಥ ಎಲ್ಲ ಹೊಣೆಗಾರಿಕೆಗಳು ಈ ಅಧಿನಿಯಮದ ಮೇರೆಗೆ ರಚಿಸಲಾದ ಮಂಡಲಿಯ ವಿರುದ್ದ ಜಾರಿಗೊಳಿಸಬಹುದಾಗಿರತಕ್ಕುದು
   4. ಸದರಿ ಹೊಸ ಮಂಡಲಿಯ ವ್ಯವಹರಣೆಗಳಿಗೆ ಸಂಬಂಧಿಸಿದಂತೆ ಸೇವೆ ಸಲ್ಲಿಸುತ್ತಿರುವ ಎಲ್ಲ ನಿಯೋಜಿತರು ಈ ಅಧಿನಿಯಮದ ಮೇರೆಗೆ ರಚಿತವಾದ ಮಂಡಲಿಯ ನಿಯೋಜಿತರಾಗತಕ್ಕುದು ;ಮತ್ತು
  2. (1)ನೇ ಉಪ ಪ್ರಕರಣದ ಉಪಬಂಧಗಳಿಗೊಳಪಟ್ಟು, ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ 1998ರ (ಕರ್ನಾಟಕ ಅಧಿನಿಯಮ 1998ರ 3) 6ನೇ ಪ್ರಕರಣದ ಉಪಬಂಧಗಳು, ಮುಂಬಯಿ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1953ರ ನಿರಸನಕ್ಕೆ ಸಂಬಂಧಿಸಿದಂತೆ ಅನ್ವಯವಾಗತಕ್ಕುದು ಮತ್ತು ಕರ್ನಾಟಕ ಸಾಮಾನ್ಯ ಖಂಡಗಳ ಅಧಿನಿಯಮ, 1998ರ 8 ಮತ್ತು 24ನೇ ಪ್ರಕರಣಗಳು ಸದರಿ ಮುಂಬಯಿ ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1953 ಈ ಅಧಿನಿಯಮದ ಮೂಲಕ ನಿರಸನಗೊಳಿಸಲಾಗಿದ್ದಿದ್ದರೆ ಮತ್ತು ಪುನರ್ ಅಧಿನಿಯಮಿತಗೊಳಿಸದ್ದಿದ್ದರೆ ಹೇಗೂ ಹಾಗೆ ಅನ್ವಯವಾಗತಕ್ಕುದು.

 

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು, 1968

2022-23 ನೇ ಸಾಲಿನ ಆಯವ್ಯಯ ವಿವರ 

ದಿನಾಂಕ 16/06/2022 ರಂದು ನಡೆದ 93ನೇ ಮಂಡಳಿ ಸಭೆಯ ನಡೆವಳಿಗಳು 

2020-2021ನೇ ಸಾಲಿನ ವಾರ್ಷಿಕ ವರದಿ 

ಇತ್ತೀಚಿನ ನವೀಕರಣ​ : 23-11-2022 01:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080